

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಜಲಮೂಲಗಳಲ್ಲಿ ನೀರು ಬತ್ತುತ್ತಿದ್ದು ನದಿ, ಹೊಳೆಗಳ ಒಡಲಲ್ಲಿ ಹಾಗೂ ಸುತ್ತಮುತ್ತಲ ಪರಿಸರಗಳಲ್ಲಿ ತ್ಯಾಜ್ಯದ ರಾಶಿ ಗೋಚರಿಸುತ್ತಿದೆ. ಪ್ರಸ್ತುತ ಇದನ್ನು ಸ್ವಚ್ಛಗೊಳಿಸಿ ಜಲಮೂಲಗಳು ಮಲಿನವಾಗದಂತೆ ಕ್ರಮ ಕೈಗೊಳ್ಳಲು ಇದು ಸಕಾಲವಾಗಿದೆ. ಜಲಮೂಲಗಳ ನೀರು ಬತ್ತತೊಡಗಿದಂತೆ ಅದರೊಳಗಿದ್ದ ಪ್ಲಾಸ್ಟಿಕ್, ಕಸ, ಬಾಟಲಿ ಇತ್ಯಾದಿ ಸೇರಿದಂತೆ ಪರಿಸರವನ್ನು ಮಲಿನಗೊಳಿಸುವ ಅನೇಕ ವಸ್ತುಗಳು ಗೋಚರಿಸುತ್ತಿವೆ. ಶುದ್ಧ ನೀರಿನ ಹರಿವಿಗೆ, ಪರಿಸರಕ್ಕೆ ಸಾಕಷ್ಟು ಹಾನಿಕಾರಕವಾಗಿರುವ ಅವುಗಳನ್ನು ತೆರವು ಮಾಡಿದರೆ ನೀರು ಸ್ವಚ್ಛವಾಗುತ್ತದೆ.
ಸೇತುವೆಗಳ ಮೇಲೆ, ಸುತ್ತಲ ಅರಣ್ಯ ಪ್ರದೇಶದಲ್ಲೂ ಸಾಕಷ್ಟು ತ್ಯಾಜ್ಯ ಕಂಡು ಬರುತ್ತಿದ್ದು ಇದನ್ನು ತೆರೆವುಗೊಳಿಸದಿದ್ದರೆ ಮಳೆ ಬಿದ್ದೊಡನೆ ನದಿಯನ್ನು ಸೇರಲಿದೆ. ಕುಡಿಯುವ ನೀರಿನ ಬಾಟಲಿ, ಪ್ಲಾಸ್ಟಿಕನ್ನು ಎಲ್ಲೆಂದರಲ್ಲಿ ಎಸೆಯುವ ಜಾಯಮಾನವಿದ್ದು, ಅದು ಕೊನೆಗೆ ಹೋಗಿ ಸೇರುವುದು ಜಲಮೂಲಗಳನು. ಮುಂದಿನ ದಿನಗಳಲ್ಲಿ ಜಲಮೂಲಗಳಲ್ಲಿ ನೀರು ಹರಿಯ ತೊಡಗಿದಾಗ ಅವು ಹರಿಯುವ ಪ್ರದೇಶಗಳ ಮೂಲಕ ಸಾಗಿ ಅಲ್ಲಲ್ಲಿ ತ್ಯಾಜ್ಯ ಜಮೆಯಾಗುತ್ತವೆ, ಅಲ್ಲದೇ ಕೆಲವು ಭಾಗ ನೇರ ಸಮುದ್ರ ಸೇರುತ್ತವೆ.
ಜಲಮೂಲಗಳ ವ್ಯಾಪ್ತಿಯಲ್ಲಿ ಜಮೆಯಾಗುವ ತ್ಯಾಜ್ಯ ಆಯಾ ಪರಿಸರದ ವನ್ಯಜೀವಿಗಳ ಜತೆ ಜನಸಾಮಾನ್ಯರ ಮೇಲು ದುಷ್ಪರಿಣಾಮ ಬೀರಿ ಪರಿಸರ ಮಾಲಿನ್ಯ, ಆರೋಗ್ಯ ಏರುಪೇರಿಗೂ ಕಾರಣವಾಗಲಿದೆ. ನದಿ, ಹೊಳೆ, ಹಳ್ಳಗಳಲ್ಲಿ ಸಂಗ್ರಹವಾಗಿರುವ ಹೂಳು ತೆರವುಗೊಂಡರೆ ಅಂತರ್ಜಲ ಮಟ್ಟ ಏರಿಕೆಗೂ ಸಹಕಾರಿಯಾಗಲಿದೆ. ನೇತ್ರಾವತಿ ನದಿ ತನ್ನ ಉಗಮ ಸ್ಥಾನದಲ್ಲಿ ಸಂಪೂರ್ಣ ಬರಿದಾಗಲು ನದಿ ಪ್ರದೇಶದಲ್ಲಿ ತುಂಬಿರುವ ಹೂಳು ಒಂದು ಕಾರಣವಾಗಿದೆ.
ಪ್ರಸ್ತುತ ಜಲಮೂಲಗಳ ಹರಿವು ಸಂಪೂರ್ಣ ಕ್ಷೀಣಿಸುತ್ತಿದೆ. ಇದು ಜಲಮೂಲಗಳಲ್ಲಿ ತುಂಬಿರುವ ತ್ಯಾಜ್ಯದ ವಿಲೇವಾರಿಗೆ ಸಕಾಲವಾಗಿದೆ. ಇದನ್ನು ತೆರವುಗೊಳಿಸಲು ಸ್ಥಳೀಯಾಡಳಿತ ಮುಂದೆ ಬಂದರೆ ಇದಕ್ಕೆ ಸ್ಥಳೀಯ ಸಂಘ ಸಂಸ್ಥೆಗಳು ಕೈಜೋಡಿಸುವುದರಲ್ಲಿ ಅನುಮಾನವಿಲ್ಲ. ಆದರೆ ಈ ಬಗ್ಗೆ ಯಾರೂ ಮುಂದೆ ಬರದಿರುವುದು ವಿಪರ್ಯಾಸ. ಜಲಮೂಲಗಳ ತ್ಯಾಜ್ಯ ತೆರವುಗೊಳ್ಳದಿದ್ದರೆ ಇದು ಮುಂದಿನ ದಿನಗಳಲ್ಲಿ ಹೆಚ್ಚಿನ ದುಷ್ಪರಿಣಾಮ ಬೀರುವುದು ಖಚಿತ. ಸ್ವಚ್ಛ ಭಾರತದ ಪರಿಕಲ್ಪನೆ ಎಂಬುದು ದಾಖಲೆಗಳಿಗೆ ಮಾತ್ರ ಸೀಮಿತವಾಗದೆ ಅನುಷ್ಠಾನಗೊಳಿಸುವ ಅಗತ್ಯವಿದೆ. ಇದು ನಮ್ಮ ಪರಿಸರದಿಂದಲೇ ಆರಂಭವಾದರೆ ಮಾತ್ರ ಸ್ವಚ್ಛತೆಯ ಅರಿವು ಮೂಡಲು ಸಾಧ್ಯ.
ಕೆಲವು ಪ್ರದೇಶಗಳನ್ನು ಜನಸಾಮಾನ್ಯರು ಕಸ ಹಾಕಲು ಕಾಯಂ ಸ್ಥಳವಾಗಿ ಗುರುತಿಸಿಕೊಂಡಿದ್ದಾರೆ ಇಲ್ಲೆಲ್ಲ ರಾಶಿ ರಾಶಿ ತ್ಯಾಜ್ಯ ಕಂಡುಬರುತ್ತದೆ. ಇದನ್ನು ಆಗೊಮ್ಮೆ, ಈಗೊಮ್ಮೆ ತೆರವುಗೊಳಿಸಲಾಗುತ್ತದೆ.ಮತ್ತೆ ಮುಂದಿನ ದಿನಗಳಲ್ಲಿ ಇಲ್ಲಿ ಮತ್ತಷ್ಟು ಕಸ ಸಂಗ್ರಹ ಗೊಳ್ಳುತ್ತದೆ ಆದರೆ ಇಂತಹ ಸ್ಥಳಗಳಲ್ಲಿ ಕಸ ಹಾಕದಂತೆ ಎಚ್ಚರಿಕೆ ಫಲಗಳನ್ನು ಅಳವಡಿಸುವ ಗೋಜಿಗೆ ಹೋಗದಿರುವುದು ಅಥವಾ ಇನ್ನಿತರ ಕ್ರಮಗಳನ್ನು ಕೈಗೊಳ್ಳದೆ ಕಸ ಹಾಕುವವರಿಗೆ ಮತ್ತಷ್ಟು ಪ್ರೋತ್ಸಾಹ ನೀಡುತ್ತಿರುವುದು ವಿಪರ್ಯಾಸ. ಕೆಲವೊಂದು ಪಂಚಾಯಿತಿಗಳಲ್ಲಿ ತ್ಯಾಜ್ಯ ವಿಲೇವಾರಿ ಘಟಕಗಳು ಇಲ್ಲದಿರುವುದು ಅಥವಾ ಅವುಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳದಿರುವುದು ಅಲ್ಲಲ್ಲಿ ಕಸ ಎಸೆಯಲು ಕಾರಣವಾಗುತ್ತಿದೆಯೇ ಎಂಬ ಸಂಶಯವು ಮೂಡುತ್ತಿದೆ.
ಜಲಮೂಲಗಳ ಪರಿಸರದಲ್ಲಿ ದಿನದಿಂದ ದಿನಕ್ಕೆ ಕಸದ ಸಂಗ್ರಹ ಹೆಚ್ಚುತ್ತಿರುವುದು ಪರಿಸರಕ್ಕೆ ಮಾರಕ. ಮಳೆಗಾಲದಲ್ಲಿ ಮಳೆ ನೀರಿನ ಜತೆ ಹರಿದು ಬರುವ ಪ್ಲಾಸ್ಟಿಕ್, ಬಾಟಲಿಗಳು ಕೃಷಿ ಭೂಮಿಯನ್ನು ಸೇರುತ್ತವೆ. ಇದು ಜಲಚರಗಳಿಗೂ ಸಮಸ್ಯೆ ನೀಡುತ್ತದೆ. ಸ್ವಚ್ಛತೆ ಎಂಬುದು ಬಲವಾಗಿ ಅನುಷ್ಠಾನಗೊಂಡು ಜಲಮೂಲಗಳ ಪ್ರದೇಶದ ನೈಜ್ಯತೆಯನ್ನು ಕಾಪಾಡಿ ಪರಿಸರವನ್ನು ರಕ್ಷಿಸುವ ಅಗತ್ಯವಿದೆ.-ಸಚಿನ್ ಭಿಡೆ, ಪರಿಸರ ಪ್ರೇಮಿ ಮುಂಡಾಜೆ https://www.vijayavani.net/madhuru-vasantha-veda-pata-shibira https://www.vijayavani.net/construction-incomplete-road-full-dust