ಕುಂದಾಪುರ: ಉಡುಪಿ ಜಿಲ್ಲಾ ಪಪೂ ಶಿಕ್ಷಣ ಇಲಾಖೆ, ಕುಂದಾಪುರ ಶ್ರೀ ವೆಂಕಟರಮಣ ಪಪೂ ಕಾಲೇಜು ಸಹಭಾಗಿತ್ವದಲ್ಲಿ ಕುಂದಾಪುರ ತಾಲೂಕುಮಟ್ಟದ ಬಾಲಕ-ಬಾಲಕಿಯರ ವಾಲಿಬಾಲ್ ಪಂದ್ಯಾಟ ಕುಂದಾಪುರದ ಶ್ರೀ ವೆಂಕಟರಮಣ ಪಪೂ ಕಾಲೇಜು ಕ್ರೀಡಾಂಗಣದಲ್ಲಿ ಶನಿವಾರ ನಡೆಯಿತು.
ಪಂದ್ಯಾಟ ಉದ್ಘಾಟಿಸಿ ಮಾತನಾಡಿದ ಸಾಲೆತ್ತೂರು ಸರ್ಕಾರಿ ಪ್ರೌಢಶಾಲೆ ದೈಹಿಕ ಶಿಕ್ಷಣ ಉಪನ್ಯಾಸಕ ರಾಘವೇಂದ್ರ ಕಂಡ್ಲೂರು, ಇಂದಿನ ಯುವ ಜನಾಂಗ ದುಶ್ಚಟಗಳಿಗೆ ದಾಸರಾಗದೆ, ತಮ್ಮ ಜೀವನದಲ್ಲಿ ಅತ್ಯುತ್ತಮ ಹವ್ಯಾಸ ಅಳವಡಿಸಿಕೊಂಡು ವಿದ್ಯೆಯೊಂದಿಗೆ ಕ್ರೀಡೆ ಸಹ ಮುಖ್ಯ ಎಂಬುದನ್ನು ಅರಿತು ಬದುಕಿನ ಯಶಸ್ಸಿನ ಮೆಟ್ಟಿಲೇರುತ್ತಾ ತಮ್ಮ ಕಾರ್ಯ ಸಾಧನೆಗಳ ಮೂಲಕ ಪ್ರಸಿದ್ಧಿ ಪಡೆಯುವಂತಾಗಲಿ ಎಂದು ಆಶಿಸಿದರು.
ಶ್ರೀ ವೆಂಕಟರಮಣ ಸಂಸ್ಥೆ ಕಾರ್ಯದರ್ಶಿ ಕೆ.ರಾಧಾಕೃಷ್ಣ ಶೆಣೈ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಉಡುಪಿ ಜಿಲ್ಲಾ ಪಪೂ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘ ಗೌರವಾಧ್ಯಕ್ಷ ಜೀವನ್ ಕುಮಾರ್ ಶೆಟ್ಟಿ, ಕುಂದಾಪುರ ದೈಹಿಕ ಶಿಕ್ಷಣ ಶಿಕ್ಷಕ ಸಂಘ ಸಂಯೋಜಕ ರಾಮ ಶೆಟ್ಟಿ, ಶ್ರೀ ವೆಂಕಟರಮಣ ಪ್ರೌಢಶಾಲೆ ಮುಖ್ಯ ಶಿಕ್ಷಕ ಕೃಷ್ಣ ಅಡಿಗ, ಪೂರ್ವ ಪ್ರಾಥಮಿಕ ವಿಭಾಗ ಮುಖ್ಯಸ್ಥ ಪ್ರಮೀಳಾ ಡಿಸೋಜಾ, ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ರಾಘವೇಂದ್ರ ಗಾಣಿಗ ಉಪಸ್ಥಿತರಿದ್ದರು.
ಶ್ರೀ ವೆಂಕಟರಮಣ ಪಪೂ ಕಾಲೇಜು ಪ್ರಾಂಶುಪಾಲ ಸಂದೀಪ್ ಗಾಣಿಗ ಸ್ವಾಗತಿಸಿದರು. ಉಪ ಪ್ರಾಂಶುಪಾಲ ಸುಜಯ್ ಕೋಟೆಗಾರ್ ವಂದಿಸಿದರು. ಕನ್ನಡ ಉಪನ್ಯಾಸಕಿ ಸುನೀತಾ ಶೆಟ್ಟಿ ನಿರೂಪಿಸಿದರು.
ಬಾಲಕಿಯರ ವಿಭಾಗದಲ್ಲಿ ಸರ್ಕಾರಿ ಪಪೂ ಕಾಲೇಜು ಶಂಕರನಾರಾಯಣ ಪ್ರಥಮ ಸ್ಥಾನ, ಭಂಡಾರ್‌ಕಾರ್ಸ್ ಪಪೂ ಕಾಲೇಜು ಕುಂದಾಪುರ ದ್ವಿತೀಯ ಸ್ಥಾನ ಪಡೆದರೆ, ಬಾಲಕರ ವಿಭಾಗದಲ್ಲಿ ಜನತಾ ಪಪೂ ಕಾಲೇಜು ಹೆಮ್ಮಾಡಿ ಪ್ರಥಮ ಸ್ಥಾನಿಯಾದರೆ, ಶ್ರೀ ವೆಂಕಟರಮಣ ಪಪೂ ಕಾಲೇಜು ದ್ವಿತೀಯ ಸ್ಥಾನ ತನ್ನದಾಗಿಸಿಕೊಂಡಿದೆ.