ಮೊದಲ ಆಮಂತ್ರಣ ಮತ್ತು ಪರಿಷ್ಕೃತ ಆಹ್ವಾನ ಪತ್ರಿಕೆ 
ಜಿಲ್ಲೆ

ಒಂದೇ ಕಾರ್ಯಕ್ರಮಕ್ಕೆ ಎರಡು ಆಹ್ವಾನ ಪತ್ರಿಕೆ!; ಸಚಿವರ ಹೆಸರು ಬಿಟ್ಟು ಹೋಗಿದ್ದಕ್ಕೆ ಆಮಂತ್ರಣ ಮರುಮುದ್ರಣ...

Webdesk - Ravikanth

ವಿಜಯನಗರ: ಒಂದೇ ಕಾರ್ಯಕ್ರಮ, ಆದರೆ ಎರಡೆರಡು ಆಹ್ವಾನ ಪತ್ರಿಕೆ ಮುದ್ರಣ. ಹೌದು.. ಸರ್ಕಾರಿ ಕಾರ್ಯಕ್ರಮವೊಂದಕ್ಕೆ ಸಂಬಂಧಿಸಿದಂತೆ ಇಂಥದ್ದೊಂದು ಬೆಳವಣಿಗೆ ಆಗಿದ್ದು, ಒಂದೇ ಕಾರ್ಯಕ್ರಮಕ್ಕೆ ತಿದ್ದುಪಡಿಯೊಂದಿಗೆ ಮತ್ತೊಂದು ಆಹ್ವಾನ ಪತ್ರಿಕೆ ಮುದ್ರಣ ಮಾಡಲಾಗಿದೆ.

ಅಷ್ಟಕ್ಕೂ ಹೀಗೆ ಮತ್ತೊಂದು ಆಹ್ವಾನ ಪತ್ರಿಕೆ ಮುದ್ರಿಸಲು ಸಚಿವರ ಹೆಸರು ಬಿಟ್ಟು ಹೋಗಿರುವುದೇ ಪ್ರಮುಖ ಕಾರಣ. ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಸರ್ಕಾರದ ವತಿಯಿಂದ ನಾಳೆ ನಡೆಯಲಿರುವ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವದ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಮೊದಲು ಸಚಿವರ ಶ್ರೀರಾಮುಲು ಅವರ ಹೆಸರು ಬಿಟ್ಟುಹೋಗಿತ್ತು.

ಸಚಿವ ಶ್ರೀರಾಮುಲು ಅವರ ಹೆಸರು ಆಹ್ವಾನ ಪತ್ರಿಕೆಯಲ್ಲಿ ಇಲ್ಲದಿರುವುದಕ್ಕೆ ಕಮಲಾಪುರ ಪಟ್ಟಣದ ವಾಲ್ಮೀಕಿ ಸಮುದಾಯದ ಯುವಕರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರ ಹಾಕಿದ್ದರು. ಮಾತ್ರವಲ್ಲ ವಾಲ್ಮೀಕಿ ಸಮುದಾಯದ ದೊಡ್ಡ ನಾಯಕರ ಹೆಸರು ಬಿಡುವ ಮೂಲಕ ಶಿಷ್ಟಾಚಾರ ಉಲ್ಲಂಘನೆಯಾಗಿದೆ. ಮಾತ್ರವಲ್ಲ, ಸಮುದಾಯದ ನಾಯಕರಿಗೆ ಅವಮಾನ ಮಾಡಲಾಗಿದೆ ಎಂದು ಯುವಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.

ಆ ಬಳಿಕ ಪರಿಷ್ಕೃತ ಆಹ್ವಾನ ಪತ್ರಿಕೆಯೊಂದನ್ನು ರೂಪಿಸಿದ ಜಿಲ್ಲಾಡಳಿತ, ಅದರಲ್ಲಿ ಸಚಿವ ಶ್ರೀರಾಮುಲು ಅವರ ಹೆಸರನ್ನು ಸೇರಿಸಿ ಹೊಸದಾಗಿ ಮತ್ತೊಂದು ಆಹ್ವಾನ ಪತ್ರಿಕೆಯನ್ನು ಮುದ್ರಣ ಮಾಡಿಸಿದೆ. ಆಹ್ವಾನ ಪತ್ರಿಕೆ ಮುದ್ರಣ ಮಾಡಬೇಕಾದರೆ ಒಂದು ರೀತಿ, ಬಳಿಕ ವಿರೋಧ ವ್ಯಕ್ತವಾದಾಗ ಮತ್ತೊಂದು ಆಹ್ವಾನ ಪತ್ರಿಕೆ ಮುದ್ರಣ ಮಾಡುವುದು ಎಷ್ಟು ಸರಿ ಅಂತ ಯುವಕರು ಪ್ರಶ್ನೆ ಮಾಡಿದ್ದರೆ, ಮತ್ತೊಂದೆಡೆ ಸರಿಯಾಗಿ ವಿವೇಚಿಸದೆ ತಪ್ಪು ಮಾಡಿ ಬಳಿಕ ಈ ರೀತಿ ಎರಡೆರಡು ಸಲ ಆಹ್ವಾನ ಪತ್ರಿಕೆ ಮುದ್ರಿಸುವ ಮೂಲಕ ಸಾರ್ವಜನಿಕ ಹಣವನ್ನು ಹಾಳು ಮಾಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.