ಕಾಡೂರು ಗ್ರಾಪಂನಲ್ಲಿ ಜರುಗಿದ ತ್ರೈಮಾಸಿಕ ಕೆಡಿಪಿ ಪ್ರಗತಿಪರಿಶೀಲನಾ ಸಭೆಯಲ್ಲಿ ಕಾಡೂರು ಗ್ರಾಪಂ ಅಧ್ಯಕ್ಷ ಜಲಂಧರ್ ಶೆಟ್ಟಿ ಮಾತನಾಡಿದರು 
ಜಿಲ್ಲೆ

ಡೆಂಘೆ ಜ್ವರ ನಿಯಂತ್ರಣಕ್ಕೆ ತುರ್ತು ಕ್ರಮ: ಕೆಡಿಪಿ ಪ್ರಗತಿಪರಿಶೀಲನಾ ಸಭೆಯಲ್ಲಿ ಜಲಂಧರ್ ಶೆಟ್ಟಿ ನಿರ್ದೇಶನ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ

ಆಶಾ ಕಾರ್ಯಕರ್ತರ ಮೂಲಕ ಮನೆ ಭೇಟಿ ಹಾಗೂ ವೈಯಕ್ತಿಕ ಜಾಗೃತಿ ಮೂಡಿಸುವ ಮೂಲಕ ಡೆಂಘೆ ಜ್ವರ ನಿಯಂತ್ರಣಕ್ಕೆ ತುರ್ತು ಕ್ರಮ ವಹಿಸಬೇಕು ಎಂದು ಕಾಡೂರು ಗ್ರಾಪಂ ಅಧ್ಯಕ್ಷ ಜಲಂಧರ್ ಶೆಟ್ಟಿ ಹೇಳಿದರು. ಕಾಡೂರು ಗ್ರಾಪಂನಲ್ಲಿ ತ್ರೈಮಾಸಿಕ ಕೆಡಿಪಿ ಪ್ರಗತಿಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮನೆ ಸುತ್ತ ನೀರು ನಿಲ್ಲದಂತೆ ಜಾಗ್ರತೆ ವಹಿಸುವುದರೊಂದಿಗೆ ಡ್ರೈ ಡೇ ಪರಿಕಲ್ಪನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿದ್ದಲ್ಲಿ ಡೆಂಘೆ ಜ್ವರ ನಿಯಂತ್ರಿಸಲು ಸಹಕಾರಿಯಾಗಲಿದೆ ಎಂದರು. ಶಿಕ್ಷಣ ಸಂಯೋಜಕ ರಾಘವ ಶೆಟ್ಟಿ ಮಾತನಾಡಿ, ಗ್ರಾಪಂ ವ್ಯಾಪ್ತಿಯ ಎಲ್ಲ ಶಾಲೆಗಳ ಸುರಕ್ಷತಾ ಸಮಿತಿ ಸಭೆ ಜರುಗಿಸಲಾಗಿದ್ದು, ತಂತ್ರಾಡಿ ಶಾಲೆ ಕಟ್ಟಡ ದುರಸ್ತಿಗೆ ಇಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ಪಿಎಂಶ್ರೀ ಯೋಜನೆಯಡಿ ಶಾಲೆಗಳ ಸಮಗ್ರ ಅಭಿವೃದ್ಧಿಗೆ ಅವಕಾಶವಿದ್ದು, ಶಾಲೆ ಉನ್ನತೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಮಾಹಿತಿ ನೀಡಿದರು.

ಪಿಡಿಒ ಮಹೇಶ್ ಕೆ. ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳ ಮೂಲಕ ಅನುಷ್ಠಾನ ಮಾಡಲಾಗಿರುವ ಕಾಮಗಾರಿ ಮತ್ತು ಕಾರ್ಯಚಟುವಟಿಕೆಗಳ ವಿವರ ಮಂಡಿಸಿದರು. ಸಾಮಾಜಿಕ ಅರಣ್ಯ ವಿಭಾಗದ ಔಡಪ್ಪ ಬಿರಾದಾರ್, ಶಿಕ್ಷಕ ಇಲಾಖೆ ಉದಯ್ ಕೋಟ, ಪಶುಪಾಲನಾ ಇಲಾಖೆ ಪುರುಷೋತ್ತಮ್, ಮೆಸ್ಕಾಂ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಗ್ರಂಥಾಲಯ, ಪೊಲೀಸ್ ಇಲಾಖೆಗಳ ಸ್ಥಳೀಯ ಹಂತದ ಅಧಿಕಾರಿಗಳು ಉಪಸ್ಥಿತರಿದ್ದರು.

ಕಂದಾಯ ಇಲಾಖೆ ಮೂಲಕ ಪಹಣಿ ಪತ್ರಕ್ಕೆ ಆಧಾರ್ ಲಿಂಕ್ ಮಾಡುವ ಪ್ರಕ್ರಿಯೆ ಜಾರಿಯಲ್ಲಿದ್ದು ಈ ಬಗ್ಗೆ ನಾಗರಿಕರಿಗೆ ಹೆಚ್ಚಿನ ಮಾಹಿತಿ ನೀಡಬೇಕು, 94(ಸಿ) ಅಡಿ ಅರ್ಹ ಫಲಾನುಭವಿಗಳಿಗೆ ಮಂಜೂರಾತಿ ನೀಡುವ ಪ್ರಕ್ರಿಯೆ ಚುರುಕುಗೊಳಿಸಬೇಕು. ಕಾಡೂರು ಗ್ರಾಪಂ ವ್ಯಾಪ್ತಿಯಲ್ಲಿ ಮೂರು ಮಂದಿ ಮಕ್ಕಳು ಅಪೌಷ್ಠಿಕತೆ ಹೊಂದಿರುವ ಬಗ್ಗೆ ಗುರುತಿಸಲಾಗಿದ್ದು, ಇಲಾಖೆ ಮತ್ತು ದಾನಿಗಳ ಸಹಕಾರದಿಂದ ಪೌಷ್ಟಿಕ ಕಿಟ್ ವಿತರಣೆಗೆ ಕ್ರಮ ವಹಿಸಲಾಗುವುದು.-ಜಲಂಧರ್ ಶೆಟ್ಟಿ ಕಾಡೂರು ಗ್ರಾಪಂ ಅಧ್ಯಕ್ಷ