ಜಿಲ್ಲೆ

ಏಕಬಳಕೆ ಪ್ಲಾಸ್ಟಿಕ್ ಮುಕ್ತ ಗ್ರಾಮ : ಉಜಿರೆ ಗ್ರಾ.ಪಂ.ನಿಂದ ಹೆಚ್ಚಿನ ಆದ್ಯತೆ : ಅಧ್ಯಕ್ಷೆ ಉಷಾ ಕಾರಂತ್ ಮಾಹಿತಿ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಆತ್ಮನಿರ್ಭರದಡಿ ಉಜಿರೆ ಗ್ರಾ.ಪಂ. ದೇಶದಲ್ಲೇ ನಾಲ್ಕನೇ ಸ್ಥಾನವಿದೆ ಎನ್ನುವುದಕ್ಕೆ ಬಹಳ ಸಂತೋಷವಾಗುತ್ತಿದೆ. ಉಜಿರೆ ಗ್ರಾ.ಪಂ. ಅತಿ ದೊಡ್ಡ ಗ್ರಾ.ಪಂ. ಆಗಿದ್ದು, ಸ್ವಚ್ಛತೆ, ಗ್ರಾಮದ ಅಭಿವೃದ್ಧಿಯಲ್ಲಿ ತಾಲೂಕಿನಲ್ಲಿ ಮಾದರಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಉಜಿರೆ ಗ್ರಾಮ ಪಂಚಾಯಿತಿಯನ್ನು ಏಕಬಳಕೆ ಪ್ಲಾಸ್ಟಿಕ್ ಮುಕ್ತ ಗ್ರಾಮವನ್ನಾಗಿಸುವಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಅಧ್ಯಕ್ಷೆ ಉಷಾ ಕಾರಂತ್ ತಿಳಿಸಿದರು.

ಉಜಿರೆ ಗ್ರಾಮ ಪಂಚಾಯಿತಿಯಿಂದ ಮಂಗಳವಾರ ಉಜಿರೆ ಶಾರದಾ ಮಂಟಪದಲ್ಲಿ ನಡೆದ ಗ್ರಾಮಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬೆಳಾಲು ರಸ್ತೆ ಶಿವಾಜಿನಗರ ಸಮೀಪ ಸಿ.ಸಿ. ಕ್ಯಾಮರಾದ ವಯರ್ ತುಂಡಾಗಿ ಕೆಳಗೆ ಬಿದ್ದಿದೆ. ಅದರ ಬುಡದಲ್ಲೇ ಕಸ ಎಸೆಯುತ್ತಿದ್ದಾರೆ. ಇವರ ಮೇಲೆ ಕಡ್ಡಾಯ ಕಾನೂನು ಕ್ರಮ ಆಗಬೇಕು ಎಂದು ಜಗದೀಶ್ ಆಗ್ರಹಿಸಿದರು. ಈ ವೇಳೆ ವಿಡಿಯೋ ಕಳುಹಿಸಿ ಎಷ್ಟು ಸಮಯ ಆಗಿದೆ ಎಂದು ಬಾಲಸುಬ್ರಹ್ಮಣ್ಯ ಭಟ್ ಪ್ರಶ್ನಿಸಿದರು. ಒಂದು ತಿಂಗಲಾಗಿದೆ ಎಂದು ಅಧ್ಯಕ್ಷರು ತಿಳಿಸಿದಾಗ, ನಮ್ಮ ಆಡಳಿತ ಯಂತ್ರ ಜಡ್ಡು ಹಿಡಿದಿದೆ ಎಂಬುದನ್ನು ಸೂಚಿಸುತ್ತದೆ ಎಂದರು.

ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಗ್ರಾಮದ ಮನಸ್ವಿನಿ ಅವರನ್ನು ಸನ್ಮಾನಿಸಲಾಯಿತು. ನೆರಿಯ ಪಶು ಆಸ್ಪತ್ರೆ ಪಶು ವೈದಾಧ್ಯಿಕಾರಿ ಡಾ.ಯತೀಶ್ ಕುಮಾರ್ ಎಂ.ಎನ್. ಮಾರ್ಗದರ್ಶಿ ಅಧಿಕಾರಿಯಾಗಿದ್ದರು. ಉಪಾಧ್ಯಕ್ಷ ರವಿಕುಮಾರ್ ಬರಮೇಲು, ಪಿಡಿಒ ಪಿ.ಎಚ್.ಪ್ರಕಾಶ್ ಶೆಟ್ಟಿ, ಕಾರ್ಯದರ್ಶಿ ಶ್ರವಣ್ ಕುಮಾರ್, ಸತೀಶ್ ಗೌಡ ಮೊದಲಾದವರಿದ್ದರು.

ಹೆದ್ದಾರಿಯಲ್ಲಿ ತೆರೆದ ಚರಂಡಿ

ರಾಷ್ಟ್ರೀಯ ಹೆದ್ದಾರಿ ಇಲಾಖೆ ರಸ್ತೆ ಬದಿ ನೀರು ಹೋಗಲು ಮಾಡಿರುವ ಚರಂಡಿ ಅಲ್ಲಲ್ಲಿ ಕುಸಿತಗೊಂಡಿದೆ. ಚರಂಡಿ ಮೇಲ್ಭಾಗ ಮುಚ್ಚುವ ಬದಲು ಅನೇಕ ಕಡೆ ತೆರೆದಿದೆ. ಇದಕ್ಕೆ ಯಾರು ಹೊಣೆ? ಮಕ್ಕಳು ಕೊಚ್ಚಿಕೊಂಡು ಹೋದರೆ ಪಾಲಕರು ಹೊಣೆಯೇ ಎಂದು ಗ್ರಾಮಸ್ಥರು ಪ್ರಶ್ನಿಸಿದರು. ಈ ವೇಳೆ ಪ್ರವೀಣ್ ಫರ್ನಾಂಡಿಸ್ ಮಾತನಾಡಿ, ನಾನು ಹೋರಾಟ ಮಾಡಿದಕ್ಕೆ ಮೂರು ಪ್ರಕರಣ ದಾಖಲಾಗಿವೆ. ಹಿಂದಿನ ಗುತ್ತಿಗೆದಾರರು ಮಾಡಿದ ಅವೈಜ್ಞಾನಿಕ ಚರಂಡಿ ಕಾರ್ಯದಿಂದ ಮಣ್ಣು ತುಂಬಿಹೋಗಿದೆ. ಸಭೆಗೆ ಮೇಲಧಿಕಾರಿಗಳನ್ನು ಕರೆಸಿ, ಗ್ರಾ.ಪಂ.ನಿಂದ ಹೆದ್ದಾರಿ ಇಲಾಖೆಗೆ ನೋಟಿಸ್ ಕಳುಹಿಸಿ ಎಂದರು. ಉಜಿರೆ ಆಸ್ಪತ್ರೆ ಲೆಕ್ಕ ಭರ್ತಿಗೆ ಮಾತ್ರ ಎಂಬಂತಾಗಿದೆ. ಶಾಶ್ವತ ವೈದ್ಯರಿಲ್ಲ. ಏನಿದ್ದರೂ ಬೆಳ್ತಂಗಡಿಗೆ ತೆರಳಬೇಕು. ಹಾಗಿದ್ದ ಮೇಲೆ ಸರ್ಕಾರಿ ಆಸ್ಪತ್ರೆ ಇದ್ದರೇನು ಪ್ರಯೋಜನ ಎಂದು ಶ್ರೀಧರ್ ಪ್ರಶ್ನಿಸಿದರು.

ವಿದ್ಯುತ್ ಕಂಬಗಳಿಗೆ ಹಾನಿ

ಉಜಿರೆ ದ್ವಾರದಿಂದ ಕಾಲೇಜು ರಸ್ತೆವರೆಗೆ ವಿಶೇಷ 146 ಬೀದಿದೀಪಗಳಿವೆ. 77 ಕಂಬ ಉರಿಯುತ್ತಿವೆ, 69 ಕಂಬ ಉರಿಯುತ್ತಿಲ್ಲ. 4 ಕಂಬ ಆಕ್ಸಿಡೆಂಟ್ ಆಗಿ ಹಾನಿಯಾಗಿದೆ. ಶ್ರೀವೇ ಸರಿಪಡಿಸಿ ಎಂದು ಗ್ರಾಮಸ್ಥರು ಆಗ್ರಹಿಸಿದರು. ಪಿಡಿಒ ಪ್ರತಿಕ್ರಿಯಿಸಿ, ಇವುಗಳಲ್ಲಿ 74 ಬೀದಿದೀಪ ಜಾಹೀರಾತು ಅಳವಡಿಸಲು ಏಲಂ ಆಗಿದೆ. ಬಳಿಕ ಗ್ರಾ.ಪಂ. ನಿರ್ವಹಣೆ ನಡೆಸಲಿದೆ. ಪ್ರತಿ ವಿದ್ಯುತ್ ಕಂಬಗಳಿಗೆ 1.50 ಲಕ್ಷ ರೂ. ಬೇಕು. ಮಳೆಗಾಲ ಬಳಿಕ ಸೂಕ್ತ ನಿರ್ವಹಣೆ ಮಾಡಲಾಗುವುದು ಎಂದರು.

ಸಾರ್ವಜನಿಕರ ಪ್ರಮುಖ ಬೇಡಿಕೆಗಳು

  • ಗ್ರಾಮದಲ್ಲಿ ಡೆಂಘೆ ಪ್ರಕರಣ ನಿಯಂತ್ರಣಕ್ಕೆ ಕ್ರಮ.
  • ಸರ್ವೇ ನಂ 552/4ರಲ್ಲಿ ಹಂದಿ ಕಸಾಯಿಕಾನೆಗೆ ಅನುಮತಿ ಬೇಡ.
  • ಉಜಿರೆ ವ್ಯಾಪ್ತಿಯಲ್ಲಿ 5 ಬಿಸಿಎಂ ಹಾಸ್ಟೆಲ್‌ಗಳಿವೆ, ಅಲ್ಲಿರುವ ಮಕ್ಕಳ ಆರೋಗ್ಯ ವಿಚಾರಣೆಗೆ ವೈದ್ಯರ ನಿಯೋಜನೆ.
  • ಅಕ್ರಮ ಸಕ್ರಮ ಅರ್ಜಿ ತುರ್ತು ವಿಲೇವಾರಿ.
  • ಉಜಿರೆಯಲ್ಲಿ ಲಾಡ್ಜ್ ಗಳಲ್ಲಿ ಆಗುತ್ತಿರುವ ವೇಶ್ಯಾವಾಟಿಕೆ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ, ಶಾಶ್ವತ ಪರವಾನಗಿ ರದ್ದು.
  • ಉಜಿರೆ- ಬೆಳಾಲು ರಸ್ತೆ ಕ್ರಾಸ್ ಬಳಿ ಹಂಪ್ಸ್ ನಿರ್ಮಾಣ.
  • ಉಜಿರೆ ದ್ವಾರದಿಂದ ಕಾಲೇಜು ರಸ್ತೆವರೆಗೆ ಅನಧಿಕೃತ ವಾಹನ ನಿಲುಗಡೆ ವಿರುದ್ಧ ಕ್ರಮ.
  • *ಜನಾರ್ದನ ಶಾಲೆ ಬಳಿ ಬ್ಯಾರಿಕೇಡ್ ಅಳವಡಿಕೆ.
  • *ಫುಟ್‌ಪಾತ್‌ನಲ್ಲಿ, ಹೆದ್ದಾರಿಯಲ್ಲೇ ವಾಹನ ನಿಲ್ಲಿಸುವುದಕ್ಕೆ ಕ್ರಮ.