

ವಿಜಯವಾಣಿ ಸುದ್ದಿಜಾಲ ಗುರುಪುರ
ವಾಮಂಜೂರು ಪ್ರದೇಶ ಬೀಡಿ ಕಾರ್ಮಿಕರ ಸಂಘ ಸಿಐಟಿಯು 32ನೇ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಹೊನ್ನಯ್ಯ ಅಮೀನ್ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ವಾಮಂಜೂರಿನ ಖಾಸಗಿ ಸಭಾಗೃಹದಲ್ಲಿ ನಡೆಯಿತು.
ಸಿಐಟಿಯು ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ ಮಾತನಾಡಿ, ದೇಶದ ಕಾರ್ಮಿಕ ಕಾನೂನಿನ ಚೌಕಟ್ಟಿನಡಿ ಪ್ರಜಾಸತ್ತಾತ್ಮಕವಾಗಿ ಕಾರ್ಮಿಕರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸಂಘಟನೆ ನಿರಂತರ ಹೋರಾಟ ನಡೆಸುತ್ತಿದೆ. ಬೀಡಿ ಉದ್ಯಮ ಅಳಿವಿನಂಚಿನಲ್ಲಿದೆ ಎನ್ನಲಾಗುತ್ತಿದರೂ ಉಭಯ ಜಿಲ್ಲೆಯಲ್ಲಿ ಈಗಲೂ 3 ಲಕ್ಷದಷ್ಟು ಮಂದಿ ಬೀಡಿ ಕಟ್ಟುತ್ತಿದ್ದಾರೆ. ಸರ್ಕಾರಕ್ಕೆ ಆದಾಯವೂ ಇದೆ. ಇವರು ಬೀಡಿ ಮಾಲೀಕರಿಂದ ಶೋಷಣೆ ಮತ್ತು ಸರ್ಕಾರದ ಕಾರ್ಮಿಕ ವಿರೋಧಿ ನೀತಿಯಿಂದ ಕಂಗಾಲಾಗಿದ್ದಾರೆ. ಕರಾವಳಿ ಜಿಲ್ಲೆಯಲ್ಲಿ ಸಂಘಟನೆ ನಡೆಸಿರುವ ಹೋರಾಟಗಳ ಫಲವಾಗಿ ಬೀಡಿ ಕಾರ್ಮಿಕರಿಗೂ ಪಿಂಚಣಿ, ಇಎಸ್ಐ, ಕನಿಷ್ಠ ವೇತನ ಸಿಗುತ್ತಿದೆ ಎಂದರು.
ಕೇಂದ್ರ ಸರ್ಕಾರ ಬೀಡಿ ಕಾರ್ಮಿಕರ ಕಲ್ಯಾಣ ಮಂಡಳಿ ದುರ್ಬಲಗೊಳಿಸಿದೆ. ಬೀಡಿ ಮೇಲೆ ಜಿಎಸ್ಟಿ ಹೇರಿದ್ದರಿಂದ ಕಾರ್ಮಿಕರ ಸಾಮಾಜಿಕ ಭದ್ರತೆಗೆ ಧಕ್ಕೆ ಉಂಟಾಗಿದೆ. ನಿವೃತ್ತ ಬೀಡಿ ಕಾರ್ಮಿಕರಿಗೆ ಮಾಸಿಕ ಪಿಂಚಣಿ ಹೆಚ್ಚಿಸಬೇಕು. ವಿವಿಧ ಬೇಡಿಕೆ ಆಗ್ರಹಿಸಿ ಜು.9ರಂದು ಮಂಗಳೂರಿನಲ್ಲಿ ಕಾರ್ಮಿಕರ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ತಿಳಸಿದರು.
ಪದಾಧಿಕಾರಿಗಳ ಆಯ್ಕೆ: ಸಂಘದ ಅಧ್ಯಕ್ಷರಾಗಿ ಹೊನ್ನಯ್ಯ ಅಮೀನ್ ಪುನರಾಯ್ಕೆಗೊಂಡರು. ಉಪಾಧ್ಯಕ್ಷರಾಗಿ ಪುಷ್ಪಾ ಹಾಗೂ ಲಿಂಗಪ್ಪ ಸಾಲ್ಯಾನ್ ಆಯ್ಕೆಗೊಂಡರು. ಭವಾನಿ(ಕಾರ್ಯದರ್ಶಿ), ಜಯಂತಿ ಮತ್ತು ಭವಾನಿ ಬೊಂಡಂತಿಲ(ಜತೆ ಕಾರ್ಯದರ್ಶಿಗಳು), ಮಾಲತಿ ಕೋಶಾಧಿಕಾರಿಯಾಗಿ ಆಯ್ಕೆಯಾದರು. ಜತೆಗೆ 13 ಮಂದಿಯ ಕಾರ್ಯಕಾರಿಣಿ ಸಮಿತಿ ರಚಿಸಲಾಯಿತು.
ದ.ಕ. ಜಿಲ್ಲಾ ಬೀಡಿ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಕಾರ್ಮಿಕ ಮುಖಂಡರಾದ ಸದಾಶಿವದಾಸ್, ನೋಣಯ್ಯ ಗೌಡ ಮಾತನಾಡಿದರು. ಸಂಘದ ಕಾರ್ಯದರ್ಶಿ ಭವಾನಿ ತಿರುವೈಲು ವರದಿ ವಾಚಿಸಿದರು. ಕೋಶಾಧಿಕಾರಿ ಮಾಲತಿ ತಿರುವೈಲು ಹಲವರು ಸ್ಥಳೀಯ ಸಮಸ್ಯೆಗಳ ಬಗ್ಗೆ ಠರಾವು ಮಂಡಿಸಿದರು. ಕಾರ್ಮಿಕ ಮುಖಂಡ ಮನೋಜ್ ವಾಮಂಜೂರು, ಸಂಘದ ಉಪಾಧ್ಯಕ್ಷೆ ಪುಷ್ಪಾ ಉಪಸ್ಥಿತರಿದ್ದರು. ಅಶೋಕ್ ಬೊಂಡಂತಿಲ ವಂದಿಸಿದರು.
ಸಂಘಟನೆ ಮುಂದೆಯೂ ಕಾರ್ಮಿಕರ ಸಮಸ್ಯೆ ಮುಂದಿಟ್ಟು ಹೋರಾಟ ನಡೆಸಲಿದೆ. ಬೀಡಿಯಷ್ಟೇ ಸಾರಾಯಿ ಸಹಿತ ಇತರ ಅಮಲು ಪದಾರ್ಥಗಳು ಕ್ಯಾನ್ಸರ್ಕಾರಕವಾಗಿದ್ದರೂ, ಪರ್ಯಾಯ ಉದ್ಯೋಗ ಸೃಷ್ಟಿಸದ ಸರ್ಕಾರಗಳು ಬೀಡಿ ಕಾರ್ಮಿಕ ವಿರುದ್ಧ ದಬ್ಬಾಳಿಕೆ, ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿವೆ. ಬಾಲಕೃಷ್ಣ ಶೆಟ್ಟಿ ಪ್ರಧಾನ ಕಾರ್ಯದರ್ಶಿ, ದ.ಕ. ಜಿಲ್ಲಾ ಬೀಡಿ ಫೆಡರೇಶನ್