14ರಂದು ಕೆಂಪು ಕಲ್ಲು, ಮರಳು ಸಮಸ್ಯೆ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

bjp
Published on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪು ಕಲ್ಲು ಹಾಗೂ ಮರಳು ಸಮಸ್ಯೆಯಿಂದ ಸಾವಿರಾರು ಕಾರ್ಮಿಕರು ಬೀದಿಗೆ ಬಿದ್ದಿದ್ದು, ಸೂಕ್ತ ನಿಯಮಾವಳಿ ರಚಿಸಿ ಸಮಸ್ಯೆ ಸರಿಪಡಿಸದ ರಾಜ್ಯ ಸರ್ಕಾರದ ವೈಫಲ್ಯದ ವಿರುದ್ಧ ಬಿಜೆಪಿ ಜು.14ರಂದು ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.

ಕೆಂಪು ಕಲ್ಲು ಹಾಗೂ ಮರಳು ಸಿಗದೆ ಬಹಳಷ್ಟು ಬಡ ವರ್ಗದವರ ನಿರ್ಮಾಣ ಹಂತದ ಮನೆಗಳು ತಟಸ್ಥವಾಗಿವೆ. ಮೇಸ್ತ್ರಿಗಳು, ಕಾರ್ಮಿಕರು, ಲಾರಿ ಚಾಲಕ, ಮಾಲೀಕರು ಕೆಲಸ ಇಲ್ಲದೆ ಸಮಸ್ಯೆಯಲ್ಲಿದ್ದಾರೆ. ಸರ್ಕಾರ ಸೂಕ್ತ ವ್ಯವಸ್ಥೆ ಕಲ್ಪಿಸುವುದರಲ್ಲಿ ವಿಫಲವಾಗಿದೆ ಎಂದವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಚುನಾವಣೆ ಸಂದರ್ಭ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಜಿಲ್ಲೆಗೆ ಪ್ರತ್ಯೇಕ ಮರಳು ನೀತಿ ರೂಪಿಸುವ ಭರವಸೆ ನೀಡಿತ್ತು. ಆದರೆ ಮೂರು ವರ್ಷವಾದರೂ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಜಿಲ್ಲೆಯಲ್ಲಿ ಅಕ್ರಮ ಆಗದಂತೆ ಪೊಲೀಸ್ ಇಲಾಖೆ ಕೈಗೊಂಡ ಕ್ರಮ ಸ್ವಾಗತಾರ್ಹ. ಆದರೆ ಕಾನೂನು ಪ್ರಕಾರವಾಗಿ ವ್ಯವಸ್ಥೆ ಕಲ್ಪಿಸಬೇಕಾಗಿದ್ದು ಸರ್ಕಾರದ ಜವಾಬ್ದಾರಿ ಎಂದವರು ಹೇಳಿದರು.

ಕೇರಳದಲ್ಲಿ 1 ಟನ್‌ಗೆ ಕೇವಲ 32 ರೂ. ರಾಜಸ್ವ ಇದ್ದರೆ, ಇಲ್ಲಿ 256 ರೂ. ಇದೆ. ಬಿಜೆಪಿ ಸರ್ಕಾರ ಇದ್ದಾಗ 91 ರೂ. ರಾಜಸ್ವ ಇತ್ತು. ಆಗ ಸರ್ಕಾರಕ್ಕೆ ರಾಜಸ್ವ ಸಂಗ್ರಹ ಉತ್ತಮವಾಗಿತ್ತು. ಆದರೆ ಈಗ ಏರಿಕೆ ಮಾಡಿದರೂ ರಾಜಸ್ವ ಸಂಗ್ರಹ ಆಗುತ್ತಿಲ್ಲ. ಅರ್ಜಿ ಹಾಕಿದ 21 ದಿನದಲ್ಲಿ ಪರವಾನಗಿ ನೀಡಬೇಕಾಗಿದ್ದು, 6 ತಿಂಗಳಾದರೂ ಪರವಾನಗಿ ಸಿಗದ ಸ್ಥಿತಿ ಇದೆ. ಸರ್ಕಾರದ ನೀತಿಯಿಂದ ಜನರು ತೊಂದರೆಗೆ ಸಿಲುಕಿದ್ದಾರೆ ಎಂದು ಸತೀಶ್ ಕುಂಪಲ ಹೇಳಿದರು.

ಶಾಸಕರಾದ ವೇದವ್ಯಾಸ ಕಾಮತ್, ಭಾಗೀರಥಿ ಮುರುಳ್ಯ, ಹರೀಶ್ ಪೂಂಜ, ಡಾ.ಭರತ್ ಶೆಟ್ಟಿ, ರಾಜೇಶ್ ನಾಕ್, ಮುಖಂಡರಾದ ಪ್ರೇಮಾನಂದ ಶೆಟ್ಟಿ, ಯತೀಶ್ ಆರ್ವಾರ, ಸಂಜಯ ಪ್ರಭು, ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ರಾವ್ ಉಪಸ್ಥಿತರಿದ್ದರು.

ಜಗನ್ನಿವಾಸ ರಾವ್ ವಿರುದ್ಧ ಶಿಸ್ತು ಕ್ರಮ

ಪುತ್ತೂರಿನಲ್ಲಿ ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಗನ್ನಿವಾಸ ರಾವ್‌ಗೆ ಪುತ್ತೂರು ಬಿಜೆಪಿ ಮಂಡಳ ಅಧ್ಯಕ್ಷರು ನೋಟಿಸ್ ಜಾರಿ ಮಾಡಿದ್ದಾರೆ. ಮದುವೆಯಾಗುವ ಭರವಸೆ ನೀಡಿದಂತೆ ನಡೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ. ಕುಟುಂಬ, ಹೆಣ್ಣು ಮಗುವಿನ ಜೀವನದ ಪ್ರಶ್ನೆ. ಯುವತಿಗೆ ನ್ಯಾಯ ಒದಗಿಸಬೇಕು ಎಂಬುದು ನಮ್ಮ ಒತ್ತಾಯ. ಇದಕ್ಕೆ ತಪ್ಪಿದರೆ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸತೀಶ್ ಕುಂಪಲ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net