ವಿಜಯವಾಣಿ ಸುದ್ದಿಜಾಲ ಕುಂದಾಪುರ
ಚುನಾವಣಾ ಕಾವು ಏರುತ್ತಿದ್ದಂತೆ ಈ ಬಾರಿ ಕಾಂಗ್ರೆಸ್ ಗೆ ಉಡುಪಿ ಜಿಲ್ಲೆಯಲ್ಲಿ ಸಮರ್ಥ, ಮಾರ್ಗದರ್ಶನ ಮಾಡಬಲ್ಲ ಹಿರಿಯ ನಾಯಕತ್ವ ಕೊರತೆ ಕಾಡುತ್ತಿದೆ.
ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್ ನಿಧನ, ಅಪರೂಪಕ್ಕೆ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುವ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಕಾಂಗ್ರೆಸ್ ನಾಯಕ ಪ್ರತಾಪಚಂದ್ರ ಶೆಟ್ಟಿ ಸಕ್ರಿಯ ರಾಜಕೀಯದಿಂದ ನಿವೃತ್ತಿ, ಯು.ಆರ್.ಸಭಾಪತಿ ನಿರ್ಲಿಪ್ತತೆ, ಮಾಜಿ ಸಚಿವರಾದ ಜಯಪ್ರಕಾಶ್ ಹೆಗ್ಡೆ, ಪ್ರಮೋದ್ ಮಧ್ವರಾಜ್ ಪಕ್ಷಾಂತರ ಮತ್ತಿತರ ಕಾರಣಗಳಿಂದ ಉಡುಪಿ ಕಾಂಗ್ರೆಸ್ ಜಿಲ್ಲಾಮಟ್ಟದಲ್ಲಿ ಸಮರ್ಥ ನಾಯಕತ್ವವಿಲ್ಲದೆ ಸೊರಗುತ್ತಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಬೊಂಟಾಟ್ ಪ್ರಚಾರದಲ್ಲಿ ತೊಡಗಿದ್ದರೂ, ಉಡುಪಿ ಜಿಲ್ಲೆಯಲ್ಲಿ ಪಕ್ಷದ ಪರ ಗಟ್ಟಿ ಧ್ವನಿಯಿಲ್ಲ ಎನ್ನುವುದು ಚುನಾವಣಾ ಕಣದಲ್ಲಿ ಸ್ಪಷ್ಟವಾಗುತ್ತಿದೆ. ಮತಯಾಚನೆಗೆ ರಾಷ್ಟ್ರೀಯ, ರಾಜ್ಯ ನಾಯಕರು ಸದ್ದು ಮಾಡುತ್ತಿದ್ದಾರೆಯೇ ವಿನಃ ಸ್ಥಳೀಯ ನಾಯಕರ ಧ್ವನಿ ಕೇಳುತ್ತಿಲ್ಲ, ಮುಖ ಪರಿಚಯವೂ ಆಗುತ್ತಿಲ್ಲ.
ಜಿಲ್ಲೆಯ ಕಾಂಗ್ರೆಸ್‌ನ ಸದ್ಯದ ಹಿರಿಯ ನಾಯಕರ ಪೈಕಿ ಮಾಜಿ ಸಚಿವ ವಿನಯಕುಮಾರ್ ಸೊರಕೆ ಮತ್ತು ಮಾಜಿ ಶಾಸಕ ಗೋಪಾಲ ಪೂಜಾರಿ ಪ್ರಮುಖರು. ಜಿಲ್ಲೆಯಲ್ಲಿ ಎಲ್ಲ ಕಾರ್ಯಕರ್ತರಿಗೆ ಪರಿಚಯ ಇರುವ ಮುಖಗಳಿವು. ಆದರೆ ಇವರಿಬ್ಬರಿಗೂ ಈ ಬಾರಿ ‘ಮಾಡು ಇಲ್ಲವೇ ಮಡಿ’ ಪರಿಸ್ಥಿತಿ. ತಮ್ಮ ಕೊನೆ ಚುನಾವಣೆ ಎಂದು ಇಬ್ಬರೂ ಹೇಳಿಕೊಂಡಿರುವುದು, ಗೆಲ್ಲಲೇಬೇಕಾದ ಒತ್ತಡದಲ್ಲಿ ತಂತಮ್ಮ ಕ್ಷೇತ್ರಗಳಲ್ಲಿ ಪ್ರಚಾರದಲ್ಲಿ ನಿರತರಾಗಿದ್ದಾರೆ. ಇವರಿಂದ ಇತರ ಕ್ಷೇತ್ರಗಳ ಸುತ್ತಾಟ ಕಷ್ಟ. ಪರಿಣಾಮ, ಉಡುಪಿ, ಕಾರ್ಕಳ ಹಾಗೂ ಕುಂದಾಪುರ ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್‌ನ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ಹರಸಾಹಸ ಪಡುತ್ತಿದ್ದಾರೆ. ಈ ಮೂರು ಕ್ಷೇತ್ರಗಳಲ್ಲೂ ಹೊಸ ಅಭ್ಯರ್ಥಿಗಳನ್ನೇ ಪಕ್ಷ ಕಣಕ್ಕಿಳಿಸಿದೆ.
ಈ ಅಭ್ಯರ್ಥಿಗಳಿಗೆ ಜನರ ಪರಿಚಯ ಕಡಿಮೆ. ದೊಡ್ಡ ನಾಯಕರಿಲ್ಲದೆ ಕಾರ್ಯಕರ್ತರಲ್ಲಿ ಹುರುಪು ಕಾಣಿಸುತ್ತಿಲ್ಲ. ಜೊತೆಯಲ್ಲಿ ಅಂತರಿಕ ಗೊಂದಲಗಳು ಹಲವು. ಅವುಗಳನ್ನು ಬಗೆಹರಿಸುವ ಕೆಲಸವಾಗಿಲ್ಲ ಎನ್ನುವುದು ಕಾರ್ಯಕರ್ತರ ಅಸಮಾಧಾನ.
ಉಡುಪಿ ಜಿಲ್ಲೆಯಲ್ಲಿ ಎರಡನೇ ಸಾಲಿನ ನಾಯಕತ್ವವನ್ನು ಬೆಳೆಸದಿರುವುದು ಪಕ್ಷದ ಇಂದಿನ ಸ್ಥಿತಿಗೆ ಕಾರಣ. ಹಿರಿಯ ನಾಯಕರೆನಿಸಿದವರು ಮೇಲೆ ಏರಿದ ಬಳಿಕ ಕೆಳ ಹಂತದ ವ್ಯವಸ್ಥೆ ಬಗ್ಗೆ ಗಮನವನ್ನು ಹರಿಸಲೇ ಇಲ್ಲ. ಕಾರ್ಯಕರ್ತರನ್ನು ಎಂದಿಗೂ ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಇದೇ ಕಾರಣದಿಂದ ಬಿಜೆಪಿ ಬೆಳೆಯಿತು. ಕಾಂಗ್ರೆಸ್ ಪಕ್ಷ ಕುಗ್ಗುತ್ತಾ ಹೋಯಿತು ಎನ್ನುವ ನೋವನ್ನು ವ್ಯಕ್ತಪಡಿಸುತ್ತಾರೆ.
ಚುನಾವಣೆಗೆ ಇನ್ನು ಉಳಿದಿರುವುದು ಹತ್ತು ದಿನ. ಕಣದಲ್ಲಿರುವ ಅಭ್ಯರ್ಥಿಗಳು ಯಾವ ರೀತಿ ಕಾರ್ಯಕರ್ತರನ್ನು, ಮತದಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರೆ ಎನ್ನುವುದರ ಮೇಲಿದೆ ಫಲಿತಾಂಶ.
ಕೇಸರಿ ಶಾಲು ಬಿಸಾಕಿ, ಕುಂಕುಮ ಎಂದರೆ ಭಯ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಂಡ ಕಾರುತ್ತಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೋಹತ್ಯೆ ನಿಷೇಧ ಕಾಯ್ದೆ, ಮತಾಂತರ ನಿಷೇಧ ಕಾಯ್ದೆಗಳನ್ನು ಹಿಂಪಡೆಯುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳುತ್ತಾರೆ. ಆದರೆ ಕಾಂಗ್ರೆಸ್ ನಾಯಕರ ಹೇಳಿಕೆಗಳಿಗೆ ವ್ಯತಿರಿಕ್ತವಾಗಿ ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ನಡೆದುಕೊಳ್ಳುತ್ತಿದೆ. ಜಿಲ್ಲೆಯಲ್ಲಿ ಬಿಜೆಪಿ ಮುಖಂಡರ, ಕಾರ್ಯಕರ್ತರ ಅಬ್ಬರ ನೋಡಿ ಕಾಂಗ್ರೆಸ್ ಕೂಡ ಅದೇ ಹೆಜ್ಜೆಗಳಲ್ಲಿ ಕಾಲಿಡುತ್ತಿದೆ. ನಾಯಕರು, ಕಾರ್ಯಕರ್ತರು ಕೇಸರಿ ಶಾಲು ಹಾಕುತ್ತಿದ್ದಾರೆ, ಅಲ್ಲಲ್ಲಿ ಕಾಂಗ್ರೆಸ್ ಸಭೆಗಳಲ್ಲಿ ಕೇಸರಿ ಧ್ವಜಗಳೂ ಕಾಣಿಸುತ್ತಿವೆ, ಗೋಶಾಲೆಗಳಿಗೂ ನಾಯಕರು ಭೇಟಿ ನೀಡಿ ಮತದಾರರ ಮನಸ್ಸನ್ನು ಗೆಲ್ಲಲು ಕಾರ್ಯಕ್ಕೆ ಮುಂದಾಗುತ್ತಿದ್ದಾರೆ.