More

    ಡಬಲ್ ಇಂಜಿನ್ ಸರ್ಕಾರಕ್ಕೆ ಅಧಿಕಾರದ ಚುಕ್ಕಾಣಿ: ಸಾಲಿಗ್ರಾಮದಲ್ಲಿ ಬಿಜೆಪಿ ಬೃಹತ್ ರೋಡ್ ಶೋ ಬಳಿಕ ಜೆ.ಪಿ.ನಡ್ಡಾ ಹೇಳಿಕೆ

    ವಿಜಯವಾಣಿ ಸುದ್ದಿಜಾಲ ಕೋಟ

    ನಮ್ಮದು ಹೆಸರಿಗೆ ಡಬಲ್ ಇಂಜಿನ್ ಸರ್ಕಾರ ಅಲ್ಲ. ಕರೊನಾ ಸಮಯದಲ್ಲಿ ವ್ಯಾಕ್ಸಿನ್, ಸ್ಟೀಲ್ ಉತ್ಪಾದಕ ಘಟಕ, ಮೊಬೈಲ್ ಉತ್ಪಾದಕ ಘಟಕ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಹೀಗೆ ಹಲವಾರು ಯೋಜನೆಗಳನ್ನು ಡಬಲ್ ಇಂಜಿನ್ ಸರ್ಕಾರ ನೀಡಿದೆ. ಈ ಬಾರಿಯೂ ಮತದಾರರು ಬಿಜೆಪಿಯನ್ನು ಬೆಂಬಲಿಸಲಿದ್ದು, ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು.

    ಸಾಲಿಗ್ರಾಮದಲ್ಲಿ ಭಾನುವಾರ ಬಿಜೆಪಿ ಬೃಹತ್ ರೋಡ್ ಶೋ ಬಳಿಕ ಸಭೆಯಲ್ಲಿ ಮಾತನಾಡಿದರು.

    ತುಮಕೂರಿನಲ್ಲಿ ಅತಿ ದೊಡ್ಡ ಉತ್ಪಾದನಾ ಘಟಕ ಸ್ಥಾಪನೆಯಾಗಲಿದ್ದು, ಮುಂದಿನ ದಿನಗಳಲ್ಲಿ ದಕ್ಷಿಣದ ಅತಿ ದೊಡ್ಡ ಉದ್ಯಮ ಕೇಂದ್ರವಾಗಲಿದೆ. ಹೆಲಿಕಾಫ್ಟರ್ ತಯಾರಿಕೆ, ರೈಲ್ವೆ ಬೋಗಿಗಳ ತಯಾರಿ ಘಟಕ ತುಮಕೂರಿನಲ್ಲಿ ಸ್ಥಾಪಿತವಾಗಲಿದ್ದು ಆ ಮೂಲಕ ಉದ್ಯೋಗ ಸೃಷ್ಟಿಯಾಗಲಿದೆ ಎಂದರು.

    ಡಬಲ್ ಇಂಜಿನ್ ಶಕ್ತಿ

    ರೈತರಿಗೆ ಮತ್ತು ಅವರ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಆರ್ಥಿಕ ವ್ಯವಸ್ಥೆ ಹೆಚ್ಚಿಸಲು ಬೊಮ್ಮಾಯಿ ಸರ್ಕಾರ ಈಗಾಗಲೇ ಸಾಕಷ್ಟು ಅನುದಾನ ನೀಡಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ಸರ್ಕಾರ ಇರುವಾಗ ಪ್ರಧಾನ್ ಮಂತ್ರಿ ಆವಾಸ್ ಯೋಜನೆ, ಆಯುಷ್ಮಾನ್ ಯೋಜನೆ, ಕಿಸಾನ್ ಯೋಜನೆಯನ್ನು ಕೇಂದ್ರದಿಂದ ಕರ್ನಾಟಕದ ಜನತೆಗೆ ನೀಡಲು ವಿಫಲವಾಗಿತ್ತು. ಆದರೆ ಯಡಿಯೂರಪ್ಪ ಮತ್ತು ಬೊಮ್ಮಾಯಿ ಈ ಎಲ್ಲ ಯೋಜನೆಗಳನ್ನು ಸಮರ್ಪಕವಾಗಿ ಜನತೆಗೆ ತಲುಪಿಸಲು ಯಶಸ್ವಿಯಾಗಿದ್ದಾರೆ. ಅಲ್ಲದೆ ಪಿಎಫ್‌ಐ ಸಂಘಟನೆಯನ್ನು ಬ್ಯಾನ್ ಮಾಡಿ ನಮ್ಮ ಡಬಲ್ ಇಂಜಿನ್ ಸರ್ಕಾರದ ಶಕ್ತಿಯನ್ನು ಈಗಾಗಲೇ ಕರ್ನಾಟಕಕ್ಕೆ ತೋರಿಸಿದ್ದೇವೆ ಎಂದು ಹೇಳಿದರು.

    ಬೇಲ್‌ನಲ್ಲಿ ಹೊರಗಿದ್ದವರಿಂದ ಭ್ರಷ್ಟಾಚಾರ ಆರೋಪ

    ಸಿದ್ದರಾಮಯ್ಯ ಚುನಾವಣೆ ಪ್ರಚಾರದಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ, ಇದನ್ನು ಕೇಳಿದರೆ ನಗು ಬರುತ್ತಿದೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅಕ್ರಮ ಆಸ್ತಿ, ಭೂಕಬಳಿಕೆ, ಮನಿ ಲಾಂಡ್ರಿಂಗ್ ಪ್ರಕರಣದಡಿ ಈಗ ಬೇಲ್‌ನಲ್ಲಿ ಹೊರಗಿದ್ದಾರೆ. ರಾಹುಲ್ ಗಾಂಧಿ ಹಾಗೂ ಇತರ ಕಾಂಗ್ರೆಸ್ ಮುಖಂಡರ ಕಥೆ ಸಹ ಇದೇ ಆಗಿದೆ ಎಂದರು.

    ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕುಂದಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಿರಣ್ ಕುಮಾರ್ ಕೊಡ್ಗಿ, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಕುಂದಾಪುರ ಬಿಜೆಪಿ ಮಂಡಲ ಅಧ್ಯಕ್ಷ ಶಂಕರ್ ಅಂಕದಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.

    ಬಿಜೆಪಿ ಮುಖಂಡ ಬೈಕಾಡಿ ಸುಪ್ರಸಾದ್ ಶೆಟ್ಟಿ ನಿರೂಪಿಸಿದರು. ಈ ಮೊದಲು ಸಾಲಿಗ್ರಾಮದ ಆಂಜನೇಯ ದೇವಳದ ರಸ್ತೆ ಮೂಲಕ ರಾಷ್ಟ್ರೀಯ ಹೆದ್ದಾರಿ ಮೂಲಕ ಸಹಸ್ರ ಸಂಖ್ಯೆಯಲ್ಲಿ ಕಾರ್ಯಕರ್ತರು ರೋಡ್ ಷೋನಲ್ಲಿ ಭಾಗಿಯಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts