

ಉಡುಪಿ: ಕಾಂಗ್ರೆಸ್ ಈ ಹಿಂದೆ ಗುಜರಾತ್, ಅಸ್ಸಾಂ, ತ್ರಿಪುರ, ಮಣಿಪುರ, ಉತ್ತರ ಪ್ರದೇಶಗಳಲ್ಲಿ ಗ್ಯಾರೆಂಟಿ ಕಾರ್ಡ್ಗಳನ್ನು ಘೋಷಿಸಿತ್ತು. ಆದರೆ ಅಲ್ಲಿನ ಜನತೆ ಇದಕ್ಕೆ ಮಾನ್ಯತೆ ನೀಡಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತುಷ್ಟೀಕರಣ, ಭ್ರಷ್ಟಾಚಾರ, ಪರಿವಾರವಾದ, ಅಸುರಕ್ಷತೆ ಗ್ಯಾರೆಂಟಿಯಾಗಿದೆ. ವಿಕಾಸ, ಶಾಂತಿ, ಸಮೃದ್ಧಿ, ಸುರಕ್ಷತೆ ಬಿಜೆಪಿಯ ಗ್ಯಾರೆಂಟಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಶನಿವಾರ ಕಟಪಾಡಿ ಗ್ರೀನ್ ವ್ಯಾಲಿ ಮೈದಾನದಲ್ಲಿ ಕಾಪು ಮತ್ತು ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ, ಮಾತನಾಡಿದರು.
ಕಾಂಗ್ರೆಸ್ ತುಷ್ಟೀಕರಣದ ಕಾರಣಕ್ಕಾಗಿ ಕರ್ನಾಟಕದಲ್ಲಿ ನಡೆದಿದ್ದ ಅನೇಕ ಬಾಂಬ್ ಸ್ಫೋಟದ ಪ್ರಕರಣಗಳನ್ನು ಸರಿಯಾಗಿ ತನಿಖೆ ಮಾಡಿಲ್ಲ. ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆ ಹೊಂದಿರುವ ಮೋದಿ ಸರ್ಕಾರ ಎಲ್ಲಾ ಪ್ರಕರಣಗಳನ್ನು ಎನ್ಐಎಗೆ ವಹಿಸಿದೆ. ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪಿಐಫ್ಐ ಚಟುವಟಿಕೆಗಳು ಮತ್ತೆ ಗರಿಗೆದರಲಿದೆ. ಗೋ ಹತ್ಯಾ ನಿಷೇಧ ಕಾಯ್ದೆ, ಮತಾಂತರ ನಿಷೇಧ ಕಾಯ್ದೆಯನ್ನು ಸಮಾಪ್ತಿಗೊಳಿಸಲಿದೆ. ಬಿಜೆಪಿಯದ್ದು ಡಬಲ್ ಇಂಜಿನ್ ಸರ್ಕಾರವಾದರೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ನದ್ದು ರಿವರ್ಸ್ ಗೇರ್ ಸರ್ಕಾರ ಎಂದು ಹೇಳಿದರು.
ಪ್ರವೀಣ್ ನೆಟ್ಟಾರು ಅವರನ್ನು ಹತ್ಯೆ ಮಾಡಿದ ಪಿಎಫ್ಐ ಸಂಘಟನೆಯನ್ನು ಮೋದಿ ಸರ್ಕಾರ ಬ್ಯಾನ್ ಮಾಡಿ ಕರ್ನಾಟಕದಲ್ಲಿದ್ದ ಅದರ ಪ್ರಮುಖ 92 ಮಂದಿ ನಾಯಕರನ್ನು ಜೈಲಿಗೆ ಅಟ್ಟಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪಿಎಫ್ಐ ಸಂಘಟನೆ ಕೇಸ್ ವಾಪಾಸು ಪಡೆದಿತ್ತು. ಓಟ್ಬ್ಯಾಂಕ್ಗಾಗಿ ದೇಶದ ಸುರಕ್ಷತೆ ವಿಚಾರದಲ್ಲಿ ರಾಜೀಮಾಡಿಕೊಂಡಿತ್ತು. ಆದರೆ ಕೇಂದ್ರ ಸರ್ಕಾರ ಪಿಎಫ್ಐ ಅನ್ನು ಬ್ಯಾನ್ ಮಾಡಿ ದಕ್ಷಿಣ ಭಾರತವನ್ನು ಸುರಕ್ಷಿತಗೊಳಿಸಿದೆ. ಈ ಬಾರಿ ಯಾರನ್ನೋ ಎಂಎಲ್ಎ, ಮಂತ್ರಿ ಮಾಡಲು ಇರುವ ಚುನಾವಣೆಯಲ್ಲ. ಕರ್ನಾಟಕದ ಭವಿಷ್ಯವನ್ನು ಸುರಕ್ಷಿತಗೊಳಿಸಲು ಜನರು ಬಿಜೆಪಿಗೆ ಮತ ನೀಡಬೇಕು ಎಂದರು.
ಮುಸ್ಲಿಂ ಮೀಸಲಾತಿ ಹೇಗೆ ಕೊಡ್ತೀರಿ?
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲಾತಿಗೆ ಅವಕಾಶವಿಲ್ಲ. ಹೀಗಾಗಿ ಮುಸ್ಲಿಂ ಮೀಸಲಾತಿ ತೆಗೆದುಹಾಕಿದ್ದೇವೆ. ಅದರ ಬದಲು ಎಸ್.ಸಿ, ಎಸ್.ಟಿ, ಲಿಂಗಾಯಿತ, ಒಕ್ಕಲಿಗರಿಗೆ ಮೀಸಲಾತಿಯನ್ನು ಏರಿಕೆ ಮಾಡಿದ್ದೇವೆ. ಇವುಗಳಲ್ಲಿ ಯಾವ ಸಮುದಾಯಕ್ಕೆ ಮೀಸಲಾತಿಯನ್ನು ಇಳಿಕೆ ಮಾಡಿ, ಮತ್ತೆ ಮುಸ್ಲಿಮರಿಗೆ ಮೀಸಲಾತಿಯನ್ನು, ಮರು ಆರಂಭಿಸುತ್ತೀರಿ ಎಂಬುದನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಬೇಕು ಎಂದು ಹೇಳಿದರು.
ಜೆ.ಡಿ.ಎಸ್ ಕಾಂಗ್ರೆಸ್ನ ಬಿ ಟೀಮ್. ಜೆ.ಡಿ.ಎಸ್ಗೆ ಮತ ನೀಡಿದರೇ ಕಾಂಗ್ರೆಸ್ಗೆ ಮತ ನೀಡಿದಂತೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಮತ ನೀಡಲು ಇಷ್ಟ ಇಲ್ಲದವರು ಜೆ.ಡಿ.ಎಸ್ಗೆ ಮತ ನೀಡಬೇಡಿ. ಪೂರ್ಣ ಬಹುಮತದ ಸರ್ಕಾರಕ್ಕಾಗಿ ಕಮಲಕ್ಕೆ ಮತನೀಡಿ ಎಂದರು.
ವೇದಿಕೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಅಭ್ಯರ್ಥಿಗಳಾದ ಸುರೇಶ್ ಶೆಟ್ಟಿ ಗುರ್ಮೆ, ಯಶ್ಪಾಲ್ ಸುವರ್ಣ, ಶಾಸಕರಾದ ರಘುಪತಿ ಭಟ್, ಲಾಲಾಜಿ.ಆರ್.ಮೆಂಡನ್, ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್, ವಿಭಾಗ ಪ್ರಭಾರಿ ಕಿದಿಯೂರು ಉದಯ್ ಕುಮಾರ್ ಶೆಟ್ಟಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಜಿಲ್ಲಾ ಉಪಾಧ್ಯಕ್ಷರಾದ ಶ್ರೀಶ ನಾಯಕ್ ಪೆರ್ಣಂಕಿಲ, ಗೀತಾಂಜಲಿ ಸುವರ್ಣ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ನಗರಾಧ್ಯಕ್ಷ ಮಹೇಶ್ ಠಾಕೂರ್, ಮಹಿಳಾಮೋರ್ಚಾ ರಾಜ್ಯ ಪ್ರ.ಕಾರ್ಯದರ್ಶಿ ಶಿಲ್ಪಾ.ಜಿ.ಸುವರ್ಣ, ಎಸ್.ಸಿ. ಮೋರ್ಚಾ ರಾಜ್ಯ ಪ್ರ.ಕಾರ್ಯದರ್ಶಿ ದಿನಕರ್ ಬಾಬು, ಕಾಪು ಮಂಡಲ ಅಧ್ಯಕ್ಷ ಶ್ರೀಕಾಂತ್ ನಾಯಕ್, ಉಡುಪಿ ಗ್ರಾಮಾಂತರ ಅಧ್ಯಕ್ಷೆ ವೀಣಾ ನಾಯ್ಕ್, ಮಹಿಳಾಮೋರ್ಚಾ ಜಿಲ್ಲಾಧ್ಯಕ್ಷೆ ವೀಣಾ ಶೆಟ್ಟಿ, ಪಕ್ಷದ ಚುನಾವಣಾ ಉಸ್ತುವಾರಿ ವಿಜಯೇಂದ್ರ ಗುಪ್ತಾ, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಉಪಸ್ಥಿತರಿದ್ದರು. ಜಿ.ಪ್ರ.ಕಾರ್ಯದರ್ಶಿ ನವೀನ್ ಶೆಟ್ಟಿ ಕುತ್ಯಾರು ಕಾರ್ಯಕ್ರಮ ನಿರೂಪಿಸಿದರು. ಕಾಪು ಮಂಡಲ ಅಧ್ಯಕ್ಷ ಶ್ರೀಕಾಂತ್ ನಾಯಕ್ ವಂದಿಸಿದರು.