ಕೊಲೆಯಾದ ಮೂಲಸಿಂಗ್  
ಜಿಲ್ಲೆ

ಅಪ್ಪನನ್ನು ಕೊಲೆ ಮಾಡಿಸಿದ್ದವನ ಹತ್ಯೆ ಮಾಡಿ ಸೇಡು ತೀರಿಸಿಕೊಂಡ ಮಗ; ಎರಡು ವರ್ಷಗಳ ಬಳಿಕ ನಡೆಯಿತು ಪ್ರತೀಕಾರ..

ಚಿತ್ರದುರ್ಗ: ಎರಡು ವರ್ಷಗಳ ಹಿಂದೆ ತಂದೆಯನ್ನು ಕೊಲೆ ಮಾಡಿಸಿದ್ದವನನ್ನು ಹತ್ಯೆ ಮಾಡಿ ಸೇಡು ತೀರಿಸಿಕೊಂಡಿರುವ ಪುತ್ರ, ಇದೀಗ ಪ್ರತೀಕಾರ ಕೈಗೊಂಡ ಎರಡೇ ವಾರದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ರಾಜಸ್ಥಾನದ ನೋಸರ್ ಬದಲಿಯಾ ಗ್ರಾಮದ ಸಂಜೀತ್ ಸಿಂಗ್ ಹಾಗೂ ಬರ್ನಾ ಗ್ರಾಮದ ಪೃಥ್ವಿರಾಜ್ ಸಿಂಗ್ ಬಂಧಿತ ಆರೋಪಿಗಳು. ಇವರು ಆಗಸ್ಟ್​ 17ರಂದು ಚಿತ್ರದುರ್ಗ ಜಿಲ್ಲೆ ಹೊಳೆಲ್ಕೆರೆಯ ಹೊಸದುರ್ಗ ರಸ್ತೆಯಲ್ಲಿರುವ ಪ್ರಿಯದರ್ಶಿನಿ ಬಟ್ಟೆ ಅಂಗಡಿ ಮಾಲೀಕ ಮೂಲಸಿಂಗ್​ನನ್ನು ಬಟ್ಟೆ ವ್ಯಾಪಾರಿಯ ಸೋಗಿನಲ್ಲೇ ಬಂದು ಗುಂಡಿಟ್ಟು ಸಾಯಿಸಿ ಪರಾರಿಯಾಗಿದ್ದರು.

ಕೊಲೆ ಮಾಡಿದ ಬಳಿಕ ಪರಾರಿಯಾಗಿದ್ದ ಇಬ್ಬರೂ ಆರೋಪಿಗಳು ರಾಜಸ್ಥಾನಕ್ಕೆ ಹೋಗಿ ತಲೆಮರೆಸಿಕೊಂಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು, ಕೊಲೆ ನಡೆದ ಎರಡೇ ವಾರದೊಳಗೆ ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.

ಮೂಲಸಿಂಗ್ ಕೊಲೆಗೆ ಹಳೇ ವೈಷಮ್ಯವೇ ಕಾರಣವಾಗಿತ್ತು. ಸಂಜೀತ್ ಸಿಂಗ್ ತಂದೆ ಕಲ್ಯಾಣ್​ ಸಿಂಗ್ ಅವರನ್ನು ಮೂಲಸಿಂಗ್ 2018ರಲ್ಲಿ ಕೊಲೆ ಮಾಡಿಸಿದ್ದ. ಕಲ್ಯಾಣ್​ ಸಿಂಗ್ ಮನೆಯಲ್ಲಿ ಒಂಟಿಯಾಗಿದ್ದಾಗ ಕೊಲೆ ಮಾಡಲಾಗಿತ್ತು. ಅದಕ್ಕೆ ಪ್ರತೀಕಾರವಾಗಿ ಸಂಜೀತ್ ಸಿಂಗ್, ಮೂಲಸಿಂಗ್ ಅಂಗಡಿಗೇ ಬಂದು ಕೊಲೆ ಮಾಡಿದ್ದಾನೆ.