ಜಿಲ್ಲೆ

ಡಿ.ಕೆ. ಶಿವಕುಮಾರ್ ಪಿಎ ಎಂದು ಹೇಳಿ ಕೈಕೊಟ್ಟ 'ವಿಶ್ವಾಸ'; ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ 15 ಲಕ್ಷ ರೂ. ಮೋಸ

ಶಿವಮೊಗ್ಗ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಪ್ತ ಸಹಾಯಕ ಎಂದು ಹೇಳಿಕೊಂಡು ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಕೆಎಸ್‌ಆರ್‌ಟಿಸಿ ಬಸ್ ನಿವೃತ್ತ ಚಾಲಕನಿಗೆ 15 ಲಕ್ಷ ರೂ. ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಮಹಿಳೆ ಸೇರಿ ಇಬ್ಬರ ವಿರುದ್ಧ ದೊಡ್ಡಪೇಟೆ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೆಎಸ್‌ಆರ್‌ಟಿಸಿ ನಿವೃತ್ತ ಚಾಲಕ ಕೆಂಚಪ್ಪ ಮೋಸ ಹೋದವರು. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಹಿರೇನಲ್ಲೂರಿನ ವಿಶ್ವಾಸ್ ಚಂದ್ರಶೇಖರ್ (35) ಹಾಗೂ ಮೈಸೂರು ಜಿಲ್ಲೆ ಯರಗನಹಳ್ಳಿಯ ಸಂಧ್ಯಾ (30) ವಂಚಿಸಿದವರು.

2016ರಲ್ಲಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುವಾಗ ವಿಶ್ವಾಸ್ ಅವರಿಗೆ ಶಿವಮೊಗ್ಗ ಅಚ್ಯುತ್‌ರಾವ್ ಲೇಔಟ್‌ನ ನಿವಾಸಿ, ಅಂದು ಚಾಲಕರಾಗಿದ್ದ ಕೆಂಚಪ್ಪ ಅವರ ಪರಿಚಯವಾಗಿತ್ತು. ಪುನಃ ಮತ್ತೊಮ್ಮೆ ಅದೇ ಬಸ್‌ನಲ್ಲಿ ಸಂಧ್ಯಾಳ ಜತೆ ವಿಶ್ವಾಸ್ ಪ್ರಯಾಣಿಸಿದ್ದ. ಈ ವೇಳೆ ತಾನು ಡಿಕೆಶಿ ಆಪ್ತ ಸಹಾಯಕ ಆಗಿದ್ದು ಸರ್ಕಾರಿ ನೌಕರಿ ಕೊಡಿಸುವುದಾಗಿ ಹೇಳಿದ್ದ. ಆತನ ಮಾತು ನಂಬಿದ ಕೆಂಚಪ್ಪ ಅವರು ತಮ್ಮ ಕಡೆಯವರಿಗೆ ಸರ್ಕಾರಿ ಕೆಲಸ ಬೇಕಿದೆ ಎಂದಿದ್ದರು.

ಇದನ್ನೇ ಬಂಡವಾಳ ಮಾಡಿಕೊಂಡ ಆರೋಪಿಗಳು ಒಬ್ಬರಿಗೆ 15 ಲಕ್ಷ ರೂ. ಆಗುತ್ತದೆ ಎಂದು ಹೇಳಿದ್ದರು. ಅಲ್ಲದೆ, ನಗದು ಮತ್ತು ಬ್ಯಾಂಕ್ ಖಾತೆ ಮೂಲಕ 15 ಲಕ್ಷ ರೂ. ಪಡೆದಿದ್ದರು. ಬಳಿಕ ಕೆಲಸದ ಬಗ್ಗೆ ಪ್ರಸ್ತಾಪಿಸಿದಾಗ ಕೊಡಿಸುವುದಾಗಿ ಭರವಸೆ ನೀಡಿದ್ದರು.

ಸಾಲ ಮಾಡಿದ್ದ ತಂದಿದ್ದ ಹಣ: ಸರ್ಕಾರಿ ಕೆಲಸ ಸಿಗುವ ಆಸೆಯಿಂದ ಕೈಗಡ ಸಾಲ ಮಾಡಿ 15 ಲಕ್ಷ ರೂ. ಹಣ ನೀಡಿದ್ದರು. ಆರೋಪಿಗಳು ಪದೇಪದೆ ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದರು. ಬಳಿಕ ಕೆಂಚಪ್ಪ ಅವರು ಇಬ್ಬರನ್ನೂ ಹುಡುಕಿಕೊಂಡು ಬೆಂಗಳೂರಿನ ಕೆಪಿಟಿಸಿಎಲ್ ಕಚೇರಿ ಸೇರಿ ಹಲವಡೆ ಹುಡುಕಾಟ ನಡೆಸಿದ್ದರು. ಮೊಬೈಲ್​ಫೋನ್​ ಸ್ವಿಚ್ಡ್​ ಆಫ್ ಮಾಡಿಕೊಂಡಿದ್ದರಿಂದ ಅವರ ಪತ್ತೆಯಾಗಿರಲಿಲ್ಲ.

ಕೊನೆಗೆ ಹಿರೇನಲ್ಲೂರಿಗೆ ಹುಡುಕಿಕೊಂಡು ಹೋದಾಗ 1 ಲಕ್ಷ ರೂ. ಮೌಲ್ಯದ ಚೆಕ್ ಕೊಟ್ಟಿದ್ದ ಆರೋಪಿಗಳು ಮುಂದಿನ ದಿನಗಳಲ್ಲಿ ಹಣ ಕೊಡುವುದಾಗಿ ನಂಬಿಸಿ ಕಳುಹಿಸಿದ್ದರು. ಆದರೆ ಕೊಟ್ಟ ಚೆಕ್ ಕೂಡ ಬೌನ್ಸ್ ಆಗಿದ್ದರಿಂದ ಕಂಗಾಲಾದ ಕೆಂಚಪ್ಪ ಅವರು ನ್ಯಾಯಾಲಯದ ಮೂಲಕ ದೊಡ್ಡಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಮುಂದಾಗಿದ್ದು ತನಿಖೆ ಚುರುಕುಗೊಳಿಸಿದ್ದಾರೆ.