ಚಿಕ್ಕಮಗಳೂರು: ವಿಘ್ನ ನಿವಾರಕ ಗಣೇಶನ ಮೂರ್ತಿಯನ್ನು ತರಲು ಹೋಗುತ್ತಿದ್ದ ವೇಳೆ ಟಾಟಾ ಏಸ್ ಪಲ್ಟಿಯಾದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಭೈರಾಪುರ ಗೇಟ್ ಬಳಿ ನಡೆದಿದೆ.
ಮೃತರನ್ನು ಲಿಂಗದಹಳ್ಳಿ ನಿವಾಸಿಗಳಾದ ಶ್ರೀಧರ್ (20) ಮತ್ತು ಧನುಷ್ (17) ಎಂದು ಗುರುತಿಸಲಾಗಿದ್ದು, ಭೈರಾಪುರ ಗೇಟ್ ಬಳಿ ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟಾಟಾ ಏಸ್ ಪಲ್ಟಿಯಾಗಿದೆ.
ಈ ಕುರಿತು ಮಾತನಾಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಲಿಂಗದಹಳ್ಳಿ ಪಟ್ಟಣದ 9 ಜನ ಯುವಕರು ಬೆಳಗ್ಗೆ ಏಳು ಗಂಟೆಗೆ ಗಣಪತಿ ತರಲೆಂದು ತಮ್ಮ ಗ್ರಾಮದಿಂದ ತರೀಕೆರೆಗೆ ಹೋಗುತ್ತಿದ್ದರು. ಭೈರಾಪುರ ಗೇಟ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಟಾಟಾ ಏಸ್ ಉರುಳಿದ ಪರಿಣಾಮ ದುರ್ಘಟನೆ ಸಂಭವಿಸಿದೆ.
ಟಾಟಾ ಏಸ್ ಬಿದ್ದ ರಭಸಕ್ಕೆ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತಿಬ್ಬರು ಯುವಕರ ತಲೆಗೆ ಗಂಭೀರ ಗಾಯವಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂವರು ಯುವಕರಿಗೂ ಗಾಯಗಳಾಗಿದ್ದು, ಹೆಚ್ಚಿನ ತರೀಕೆರೆ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.