ಜಿಲ್ಲೆ

ಮಂಗಳೂರಿನಲ್ಲಿ ಮುಂದುವರಿದ ನೈತಿಕ ಪೊಲೀಸ್​ಗಿರಿ; ವರದಿಗಾರ, ಪೊಲೀಸ್​ ಮೇಲೂ ಹಲ್ಲೆಗೆ ಯತ್ನ

Webdesk - Manjunatha B

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು ತಿಂಗಳುಗಳಿಮದ ನೈತಿಕ ಪೊಲೀಸ್​​ಗಿರಿ ಪ್ರಕರಣಗಳು ಹೆಚ್ಚುತ್ತಿದ್ದು, ಅಂಥ ಘಟನೆಗಳ ಬಗ್ಗೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್ ಎಚ್ಚರಿಕೆ ನೀಡಿದ್ದರು ಸಹ ಯಾವುದೇ ಪ್ರಯೋಜನವಾಗದಂತೆ ಕಾಣುತ್ತಿದೆ.

ಇದೀಗ ಎರಡು ಪ್ರತ್ಯೇಕ ಘಟನೆಗಳಲ್ಲಿ ಮಾಧ್ಯಮ ವರದಿಗಾರ ಹಾಗೂ ಪೊಲೀಸ್​ ಸಿಬ್ಬಂದಿ ಮೇಲೆ ನೈತಿಕ ಪೊಲೀಸ್​ ಗಿರಿ ನಡೆಸಿ ಹಲ್ಲೆಗೆ ಯತ್ನಿಸಿರುವ ಘಟನೆ ನಗರದ ಕಾವೂರು ಹಾಗೂ ಬಿ.ಸಿ. ರೋಡ್​ ಜಂಕ್ಷನ್​ನಲ್ಲಿ ನಡೆದಿದೆ.

ವರದಿಗಾರನ ಮೇಲೆ ಹಲ್ಲೆ

ಖಾಸಗಿ ಸುದ್ದಿಸಂಸ್ಥೆಯೊಂದರಲ್ಲಿ ವರದಿಗಾರರಾಗಿ ಕೆಲಸ ಮಾಡುತ್ತಿರುವ ಅಭಿಜಿತ್​ ಎಂಬುವವರು ತನ್ನ ಸ್ನೇಹಿತೆಯ ಜೊತೆ ಊಟಕ್ಕೆ ತೆರಳಿ ವಾಪಸ್​ ಆಗುತ್ತಿದ್ದ ವೇಳೆ ಕೋಟೇಕಾರು ನಿವಾಸಿ ಚೇತನ್ (37) ಹಾಗೂ ಯೆಯ್ಯಾಡಿ ನಿವಾಸಿ ನವೀನ್(43) ಇಬ್ಬರನ್ನು ತಡೆದು ನೀವನು ಬ್ಯಾರಿಯಾ ಎಂದು ಪ್ರಶ್ನಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಬಂಧಿತ ಆರೋಪಿಗಳು

ಹಿಂದೂ ಯುವತಿ ಜೊತೆ ನಿನಗೇನು ಕೆಲಸ ಎಂದು ನಿಂದಿಸಿ ಆತನನ್ನು ಮುಸ್ಲಿಂ ಎಂದು ತಪ್ಪಾಗಿ ಅರ್ಥೈಸಿಕೊಂಡು ಇಬ್ಬರು ಆರೋಪಿಗಳು ಅಭಿಜಿತ್​ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಘಟನೆ ಸಂಬಂಧ ಅಭಿಜಿತ್​ ಕಾವೂರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ಪೊಲೀಸ್​ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನ

ಮತ್ತೊಂದು ಘಟನೆಯಲ್ಲಿ ತಮ್ಮ ಪತ್ನಿ ಹಾಗೂ ಅತ್ತಿಗೆ ಜೊತೆ ನಡೆದುಕೊಂಡು ಹೋಗುತ್ತಿದ್ದ ಪೊಲೀಸ್​ ಅಧಿಕಾರಿ ಜೊತೆ ಕುಡಿದ ಮತ್ತಿನಲ್ಲಿ ಇಬ್ಬರು ನೈತಿಕ ಪೊಲೀಸ್​ ಗಿರಿ ಎಸಗಿರುವ ಘಟನೆ ಬಂಟ್ವಾಳದಲ್ಲಿ ನಡೆದಿದೆ.

ಪೊಲೀಸ್​ ಅಧಿಕಾರಿ ಕುಮಾರ್​ ರೆಸ್ಟೋರೆಂಟ್ ನಲ್ಲಿ ಊಟ ಮುಗಿಸಿ ತನ್ನ ಪತ್ನಿ ಮತ್ತು ಆಕೆಯ ಸಹೋದರಿಯನ್ನು ತನ್ನ ಕ್ವಾರ್ಟರ್ಸ್‌ಗೆ ಬಿಡಲು ಹೋಗುತ್ತಿದ್ದಾಗ ಆರೋಪಿಗಳು ಅವರನ್ನು ಹಿಂಬಾಲಿಸಿದ್ದಾರೆ. ದಾರಿಯಲ್ಲಿ ಅಡ್ಡಗಟ್ಟಿ, ಮಹಿಳೆಯರ ಸಹವಾಸದಲ್ಲಿ ಏಕೆ ಇದ್ದೀರಿ ಎಂದು ಇಬ್ಬರೂ ಪ್ರಶ್ನಿಸಿದರು. ಆರೋಪಿಗಳು ಕುಮಾರ್ ಗೆ ನಿಂದಿಸಿ ಕಿರುಕುಳ ನೀಡಿದ್ದಾರೆ. 

ಇದಲ್ಲದೆ ಆರೋಪಿಗಳಿಬ್ಬರು ಪೊಲೀಸ್​ ಅಧಿಕಾರಿ ಕುಮಾರ್​ ಹಾಗೂ ಅವರ ಪತ್ನಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಪ್ರಕರಣ ಸಂಬಂಧ ಬಂಟ್ವಾಳ ಪೊಲೀಸರು ಮನೀಶ್ ಮತ್ತು ಮಂಜುನಾಥ್ ಎಂಬುವವರನ್ನು ವಶಕ್ಕೆ ಪಡೆದು ಆರೋಪಿಗಳ ವಿರುದ್ಧ ಭಾರತ ದಂಡ ಸಂಹಿತೆ(IPC Section) 341, 504, 354, 354(ಎ) ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.