ಕಡಬ: ಕೈೊಲ ಗ್ರಾಮದ ಸಬಳೂರು ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಶನಿವಾರ ಶಾಲಾ ಆವರಣದ ಪಕ್ಕದಲ್ಲಿ ಹಾದು ಹೋಗಿರುವ ಏಣಿತ್ತಡ್ಕ - ಗೋಳಿತ್ತಡಿ ರಸ್ತೆಯಲ್ಲಿ ಸಂಚಾರ ಮಾಡುತ್ತಿದ್ದ ವಾಹನ ಸವಾರರಿಗೆ ಸಂಚಾರಿ ನಿಯಮ ಪಾಲನೆಯ ಪಾಠ ಬೋಧಿಸಿದರು. ಶಿಕ್ಷಕರ ಮಾರ್ಗದರ್ಶನದಲ್ಲಿ ಸಂಚಾರಿ ನಿಯಮ ಪಾಲನೆ ಜಾಥಾ ಅಂಗವಾಗಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಯಿತು.
ಶಾಲಾ ಆವರಣದ ಮುಖ್ಯದ್ವಾರದ ಬಳಿ ರಸ್ತೆಗಿಳಿದ ವಿದ್ಯಾರ್ಥಿಗಳು ಕಾರು, ರಿಕ್ಷಾ, ಲಾರಿ, ಜೀಪು, ದ್ವಿಚಕ್ರ ವಾಹನ ತಡೆದು ನಿಲ್ಲಿಸಿ ಸೀಟ್‌ಬೆಲ್ಟ್, ಯೂನಿಫಾರಂ, ಹೆಲ್ಮೆಟ್ ಮುಂತಾದುವುಗಳ ನಿಯಮ ಪಾಲನೆ ಮಾಡಲು ತಿಳಿಸಿದರು.
ಮುಖ್ಯ ಶಿಕ್ಷಕಿ ವಾರಿಜಾ ಬಿ. ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಅಯೋಜನೆಗೊಂಡಿತ್ತು. ಕೊಲ ಗ್ರಾಮ ಪಂಚಾಯಿತಿ ಸದಸ್ಯ ಚಿದಾನಂದ ಪಾನ್ಯಾಲು, ಎಸ್‌ಡಿಎಂಸಿ ಅಧ್ಯಕ್ಷ ಶೇಖರ ಗೌಡ ಕೊಲ್ಯ, ಉಪಾಧ್ಯಕ್ಷೆ ರಮಿತಾ, ಶಿಕ್ಷಕರಾದ ಶೇಖರ ಬಲ್ಯ, ವೆಂಕಟೇಶ್, ರವಿಚಂದ್ರ, ಶಿಕ್ಷಕಿಯರಾದ ಅಂಜನಾ, ತಾರಾದೇವಿ, ತೇಜಸ್ವಿನಿ, ದೈಹಿಕ ಶಿಕ್ಷಣ ಶಿಕ್ಷಕಿ ವನಜಾ ಮೊದಲಾದವರಿದ್ದರು.