ಕಡಬ: ಕುಮಾರಧಾರಾ ನದಿಗೆ ಶಾಂತಿಮೊಗರು ಎಂಬಲ್ಲಿ ನಿರ್ಮಾಣವಾದ ಕಿಂಡಿ ಅಣೆಕಟ್ಟು ನಿಷ್ಟ್ರಯೋಜಕವಾಗಿದೆ ಎಂದು ಸಂಬಂಧಪಟ್ಟವರಿಗೆ ದೂರು ನೀಡಿದರೂ ಯಾವೂದೇ ಸ್ಪಂದನೆ ದೊರೆತಿಲ್ಲ. ಹಾಗಾಗಿ ಮೇ 10ರಂದು ಬೆಳಗ್ಗೆ ಶಾಂತಿಮೊಗರು ಸೇತುವೆಯಲ್ಲಿ ರಸ್ತೆ ತಡೆದು ಪ್ರತಿಭಟಿಸಲಾಗುವುದು ಎಂದು ರೈತ ಮುಖಂಡ ಜನಾರ್ದನ ಕಯ್ಯಪೆ ತಿಳಿಸಿದರು.
ಬುಧವಾರ ಕಡಬದ ಆಲಂಕಾರು ಗ್ರಾಮದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
7.5 ಕೋಟಿ ರೂ. ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರು ಹಾಗೂ ಕೃಷಿ ಬಳಕೆಗಾಗಿ ಕಿಂಡಿ ಅಣೆಕಟ್ಟು ನಿರ್ಮಾಣವಾಗಿದೆ. ಅಣೆಕಟ್ಟಿನ ಮೇಲ್ಬಾಗದ 12 ಕಿ.ಮೀ. ಸುತ್ತಳತೆಯ 2,500ಕ್ಕೂ ಹೆಚ್ಚು ರೈತರಿಗೆ ಅನುಕೂಲವಾಗುತ್ತದೆ. ಕಳೆದ ವರ್ಷ ಹಲಗೆ ಜೋಡಣೆಯಿಂದ ಪ್ರಯೋಜನವಾಗಿಲ್ಲ. ಈ ವರ್ಷ ರೈತರ ಒತ್ತಡ ಮೇರೆಗೆ ಅಳವಡಿಸಲಾಗಿದ್ದು, ನೀರು ಶೇಖರಣೆಗೊಂಡಿದ್ದರೂ ಎರಡು ವಾರದ ಹಿಂದೆ ಕಿಡಿಗೇಡಿಗಳು ಅಣೆಕಟ್ಟಿನ ಹಲಗೆ ವಿರೂಪಗೊಳಿಸಿ ನೀರು ಪೋಲಾಗುವಂತೆ ಮಾಡಿದ್ದಾರೆ. ನದಿಯಲ್ಲಿ ಮರಳುಗಾರಿಕೆ ಮಾಡುವವರು ಕೃತ್ಯ ಎಸಗಿದ್ದಾರೆ ಎನ್ನಲಾಗುತ್ತಿದೆ ಎಂದರು.
ರೈತರು ಕಿಂಡಿ ಅಣೆಕಟ್ಟಿನ ಬಳಿ ಜಮಾಯಿಸಿ ಪ್ರತಿಭಟನೆ ನಡೆಸಿ ಅಧಿಕಾರಿಗಳ ಗಮನಕ್ಕೂ ತಂದಾಗ ಪೊಲೀಸರಿಗೆ ದೂರು ನೀಡುವುದಾಗಿ ತಿಳಿಸಿದ್ದರು. ಇದೂವರೆಗೆ ಯಾವೂದೇ ದೂರು ದಾಖಲಾಗಿಲ್ಲ. ಅಲ್ಲದೆ ಹಲಗೆ ಸರಿಪಡಿಸದೆ ಹಾಗೇ ಬಿಡಲಾಗಿದೆ ಎಂದರು.
ಈ ಬಾರಿ ಕರಾವಳಿಯಲ್ಲೂ ಬರದ ಛಾಯೆ ಇದೆ. ಕಿಂಡಿ ಅಣೆಕಟ್ಟು ಬರಿದಾಗಿರುವುದು ಹತಾಶೆಗೆ ಕಾರಣವಾಗಿದೆ. ಉಪಯೋಗ ಶೂನ್ಯ ಅಣೆಕಟ್ಟನ್ನು ದುರಸ್ತಿಗೊಳಿಸಲು ವಿಫಲವಾದ ಅಧಿಕಾರಿ ವರ್ಗದ ಗಮನ ಸೆಳೆಯಲು ರಸ್ತೆ ತಡೆದು ಪ್ರತಿಭಟಿಸಲಾಗುವುದು ಎಂದರು.
ಹರೀಶ್ ಗೌಡ ಎಂತಡ್ಕ, ಸಂದೀಪ್ ಪಾಂಜೋಡಿ ಮೊದಲಾದವರು ಸುದ್ದಿಗೋಷ್ಠಿಯಲ್ಲಿದ್ದರು.