ಜಿಲ್ಲೆ

ತೀರಿ ಹೋದವರ ನೋಡಿ ಬರುವುದರೊಳಗೆ ಮನೆ ತಿಜೋರಿ ಖಾಲಿ; ಹಾಡಹಗಲೇ ಮೂರು ಮನೆಗಳವು

ಹಾವೇರಿ: ಹಾಡಹಗಲೇ ಮೂರು ಮನೆಗಳಿಗೆ ನುಗ್ಗಿ ಕಳವು ಮಾಡಿರುವ ಖದೀಮರು, ತೀರಿ ಹೋದವರನ್ನು ನೋಡಲು ಹೋದವರು ವಾಪಸ್ ಮನೆಗೆ ಬಂದು ನೋಡುವಾಗ ಮತ್ತೊಂದು ಶಾಕ್​ ಆಗುವಂತೆ ಮಾಡಿದ್ದಾರೆ. ಹಾವೇರಿ ಜಿಲ್ಲೆ ಮರಡೂರು ಗ್ರಾಮದಲ್ಲಿ ಈ ಸರಣಿ ಕಳ್ಳತನ ನಡೆದಿದೆ.

ಗ್ರಾಮದ ವೀರಭದ್ರಯ್ಯ ಕೊಕ್ಕರಗೊಂದಿ ಮಠ, ಚಂದ್ರಶೇಖರಯ್ಯ ಹಿರೇಮಠ ಹಾಗೂ ಚೆನ್ನಯ್ಯ ಹಿರೇಮಠ ಅವರ ಮನೆಗೆ ಹಗಲಿನಲ್ಲೇ ನುಗ್ಗಿದ್ದ ಕಳ್ಳರು ನಗ-ನಗದು ದೋಚಿದ್ದಾರೆ. ತೀರಿ ಹೋದವರನ್ನು ನೋಡಿ ಬರಲು ಹೋಗಿದ್ದ ಸಮಯವನ್ನೇ ಈ ಕಳ್ಳರು ದುರ್ಬಳಕೆ ಮಾಡಿಕೊಂಡಿದ್ದಾರೆ.

ವೀರಭದ್ರಯ್ಯ ಕೊಕ್ಕರಗೊಂದಿ ಮಠ ಎಂಬುವರ 30 ಗ್ರಾಂ ಬಂಗಾರ 10 ಸಾವಿರ ನಗದು, ಚಂದ್ರಶೇಖರಯ್ಯ ಹಿರೇಮಠ ಅವರ ಮನೆಯಲ್ಲಿದ್ದ 30 ಸಾವಿರ ನಗದು ಮತ್ತು ಚೆನ್ನಯ್ಯ ಹಿರೇಮಠ ಅವರಿಗೆ ಸೇರಿದ 10 ಗ್ರಾಂ ಬಂಗಾರ ಮತ್ತು 10 ಸಾವಿರ ನಗದು ಸೇರಿ ಒಟ್ಟು 4 ತೊಲೆ ಬಂಗಾರ ಹಾಗೂ 50 ಸಾವಿರ ರೂಪಾಯಿ ನಗದು ದೋಚಿಕೊಂಡು ಕಳ್ಳರು ಪರಾರಿಯಾಗಿದ್ದಾರೆ. ಗುತ್ತಲ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.