ಜಿಲ್ಲೆ

ಪತ್ನಿಯ ಶೋಕಿಗೆ ಬಲಿಯಾಯ್ತು ಸುಂದರ ಕುಟುಂಬ; ಮಕ್ಕಳೊಂದಿಗೆ ಪ್ರಾಣಬಿಟ್ಟ ತಂದೆ

Webdesk - Manjunatha B

ಆನೇಕಲ್​: ರಾಜ್ಯ ರಾಜಧಾನಿ ಬೆಂಗಳೂರು ಹೊರವಲಯದ ಆನೇಕಲ್​ ತಾಲ್ಲೂಕಿನಲ್ಲಿ ಮಕ್ಕಳನ್ನು ಕೊಂದು ತಂದೆ ನೇಣಿಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.

ಪತ್ನಿ ಶೋಕಿಗೆ ಮಕ್ಕಳನ್ನು ಕೊಂದು ಪತಿ ನೇಣಿಗೆ ಶರಣಾಗಿರುವುದಾಗಿ ತಿಳಿದು ಬಂದಿದ್ದು ಮೃತ ದುರ್ದೈವಿಗಳನ್ನು ಹರೀಶ್ ( 35) ಪ್ರಜ್ವಲ್(6) ರಿಷಬ್(4) ಎಂದು ಗುರುತು ಹಿಡಿಯಲಾಗಿದೆ.

ಆತ್ಮಹತ್ಯೆಗೂ ಮುನ್ನ ಸ್ನೇಹಿತನಿಗೆ ಕರೆ

ಘಟನೆ ಮೇ 10ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೂ ಮುನ್ನ ಹರೀಶ್​ ತನ್ನ ಸ್ನೇಹಿತನಿಗೆ ಕರೆ ಮಾಡಿದ್ದು ಕಾಲವಾದ ನಂತರ ಬರಬೇಕಾಗಿರುವ ಹಣ ಹಾಗೂ ಎಲ್​ಐಸಿ ಬಾಂಡ್​ಅನ್ನು ಪತ್ನಿಗೆ ನೀಡುವಂತೆ ಹೇಳಿದ್ದಾರೆ.

ಹರೀಶ್​ ಕರೆ ಮಾಡಿರುವ ಲೊಕೇಷನ್​ ಬಗ್ಗೆ ಸ್ನೇಹಿತ ಹುಡುಕಾಟ ನಡೆಸಿದ್ದು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ನೀಡಿದ ಎರಡು ದಿನಗಳ ಬಳಿಕ ಜಿಗಣಿ ಪೊಲೀಸ್​ ಠಾಣಾ ವ್ಯಾಪ್ತಿಯ ಕೊಪ್ಪ ಸಮೀಪದ ನಿರ್ಮಣ ಬಡಾವಣೆಯಲ್ಲಿ ಇರುವುದು ತಿಳಿದು ಬಂದಿದೆ.

ಪ್ರೀತಿಸಿ ಮದುವೆಯಾದರೂ ಸಿಗಲಿಲ್ಲ ನೆಮ್ಮದಿ

2007ರಲ್ಲಿ ಹರೀಶ್​ ತನ್ನ ಅಕ್ಕನ ಮಗಳಾದ ಅನನ್ಯಳನ್ನು ಪ್ರೀತಿಸಿ ಮದುವೆಯಾಗಿದ್ದರು. ಬೆಂಗಳೂರಿನ ಗಾರೆಬಾವಿ ಪಾಳ್ಯದಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು.

ವಿವಾಹದ ಬಳಿಕ ಪತ್ನಿಯ ಹೈ-ಪೈ ಜೀವನದ ವಿಚಾರವಾಗಿ ದಂಪತಿಗಳ ನಡುವೆ ಗಲಾಟೆಯಾಗುತ್ತಿತ್ತು. ಈ ವಿಚಾರವಾಗಿ 2015ರಲ್ಲಿ ಹಿರಿಯರ ಸಮ್ಮುಖದಲ್ಲಿ ರಾಜಿ ಸಂಧಾನವು ಸಹ ಆಗಿತ್ತು.

ಪರ ಪುರುಷನೊಂದಿಗೆ ಪರಾರಿ

2021ರಲ್ಲಿ ದಂಪತಿಗಳು ಪ್ರತ್ಯೇಕವಾಗಿ ಮನೆ ಮಾಡಿ ವಾಸಿಸುತ್ತಿದ್ದರು. ಕೆಲ ದಿನಗಳ ನಂತರ ಪತ್ನಿ ಅನನ್ಯ ಪರ ಪುರುಷನೊಂದಿಗೆ ಪರಾರಿಯಾಗಿದ್ದಳು.

ತಬ್ಬಲಿಯಾದ ಇಬ್ಬರು ಮಕ್ಕಳನ್ನು ಪೋಷಿಸುತ್ತಾ ಹರೀಶ್​ ಜೀವನ ಸಾಗಿಸುತ್ತಿದ್ದರು. ಈ ವೇಳೆ ಪತ್ನಿ ಹಣ ನೀಡುವಂತೆ ಪತಿಗೆ ಕಿರುಕುಳ ನೀಡುತ್ತಿದ್ದಳು ಎಂದು ತಿಳಿದು ಬಂದಿದೆ.

ಕೆಲಸದ ಜೊತೆಗೆ ಮಕ್ಕಳ ಪೋಷಣೆ ಹಾಗು ಪತ್ನಿಯ ಕಿರುಕುಳಕ್ಕೆ ಬೇಸತ್ತಿದ್ದ ಹರೀಶ್​ ಮೇ 10ರಂದು ನೇಣಿಗೆ ಶರಣಾಗಿದ್ದಾರೆ.