ಮಡಿಕೇರಿ: ಕರ್ನಾಟಕದ ಕಾಶ್ಮೀರ ಎಂದೇ ಖ್ಯಾತಿ ಪಡೆದಿರುವ ಕೊಡಗಿನ ಭಾಗಮಂಡಲದ ತಲಕಾವೇರಿ ( Tala Kaveri ) ಯಲ್ಲಿ ಪವಿತ್ರ ತೀರ್ಥೋದ್ಭವ ( Cauvery Theerthodbhava ) ವಾಗಿದೆ. ತೀರ್ಥರೂಪಿಣಿಯಾಗಿ ದರ್ಶನ ನೀಡಿದ ತಾಯಿ ಕಾವೇರಿ ( Kaveri ) ಯನ್ನು ಭಕ್ತರು ಕಣ್ತುಂಬಿಕೊಂಡಿದ್ದಾರೆ.
ಇಂದು ಮುಂಜಾನೆ 7.41ರ ತುಲಾ ಲಗ್ನದಲ್ಲಿ ತೀರ್ಥರೂಪಿಣಿಯಾಗಿ ತಾಯಿ ಕಾವೇರಿ ಭಕ್ತರಿಗೆ ದರ್ಶನ ನೀಡಿದಳು. ಈ ಪವಿತ್ರ ಕ್ಷಣಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ಇನ್ನು ಒಂದು ತಿಂಗಳು ಭಾಗಮಂಡಲದಲ್ಲಿ ಕಾವೇರಿ ಜಾತ್ರೆ ನಡೆಯಲಿದ್ದು, ತಲಕಾವೇರಿಯತ್ತ ಭಕ್ತರು ಹರಿದು ಬರುತ್ತಿದ್ದಾರೆ.
ಹಿಂದೂ ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆ ವತಿಯಿಂದ ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯದಲ್ಲಿ ಇಂದು ಬೆಳಗ್ಗೆ (ಅ.17) 7. 41ಕ್ಕೆ ತುಲಾ ಲಗ್ನದಲ್ಲಿ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವದ ಪುಣ್ಯ ಕಾಲ ನೆರವೇರಿದೆ.
ಪವಿತ್ರ ತೀರ್ಥೋದ್ಭವದ ಪೂಜಾ ಕಾರ್ಯಕ್ರಮಗಳು ಪ್ರಧಾನ ಅರ್ಚಕ ಪ್ರಶಾಂತ್ ಅಚಾರ್ ನೇತೃತ್ವದಲ್ಲಿ ನಡೆಯಿತು. ತೀರ್ಥರೂಪಿಣಿಯಾಗಿ ಕಾವೇರಿ ದರ್ಶನ ನೀಡುತ್ತಿದ್ದಂತೆ ಸಾವಿರಾರು ಭಕ್ತರು ಕಾವೇರಿಗೆ ಜಯಘೋಷ ಹಾಕಿದರು. ಅಲ್ಲದೆ, ಪವಿತ್ರ ತೀರ್ಥೋದ್ಭವದಲ್ಲಿ ಮಿಂದೆದ್ದರು.
ಪವಿತ್ರ ತೀರ್ಥೋದ್ಭವ ಹಿನ್ನೆಲೆಯಲ್ಲಿ ತಲಕಾವೇರಿಯಲ್ಲಿ 7 ಕಿಮೀ ರಸ್ತೆಯುದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತಿವೆ. ವಿವಿಧ ಕೊಡವ ಸಂಘಟನೆಗಳು ಪಾದಯಾತ್ರೆ ಮಾಡಿವೆ.