ಜಿಲ್ಲೆ

ಕರೊನಾ ನಿರ್ವಹಣೆಯಲ್ಲಿ ಇಲಾಖೆಗಳ ದ್ವಂದ್ವಯುದ್ಧ; ಸಚಿವರ ನಡುವೆ ಹಗ್ಗಜಗ್ಗಾಟ

ಬೆಂಗಳೂರು: ಕರೊನಾ ನಿರ್ವಹಣೆಯಲ್ಲಿ ದೇಶಕ್ಕೆ ನಾವೇ ಮಾದರಿ ಎಂದು ಆರಂಭಶೂರತ್ವ ಮೆರೆದಿದ್ದ ರಾಜ್ಯ ಸರ್ಕಾರ ಇಂದು ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯನ್ನು ಒಂದು ಮಾಡದೆ ಹಿನ್ನಡೆಗೆ ಸಿಲುಕಿದೆ. ಅತಿಹೆಚ್ಚು ಸೋಂಕಿತರನ್ನು ಹೊಂದಿದ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರವನ್ನು ಮೀರಿಸಲು ಕರ್ನಾಟಕ ಪೈಪೋಟಿ ನಡೆಸಿರುವುದು ಜನತೆಯನ್ನು ಆತಂಕಕ್ಕೆ ತಳ್ಳಿದೆ. ಈ ವೈಫಲ್ಯ, ಹಿನ್ನಡೆಗೆ ಕಾರಣಗಳನ್ನು ಪಟ್ಟಿ ಮಾಡಿದಲ್ಲಿ ಹಲವು ತಪ್ಪು ತೀರ್ಮಾನಗಳು ಗೋಚರಿಸುತ್ತವೆ. ಜತೆಗೆ ಕರೊನಾ ನಿರ್ವಹಣೆಗಾಗಿ ರಚನೆಗೊಂಡ ಉನ್ನತ ಮಟ್ಟದ ಟಾಸ್ಕ್ ಫೋರ್ಸ್ ಚಟುವಟಿಕೆಯನ್ನೇ ಸಂಶಯದಿಂದ ನೋಡುವಂತಾಗಿದೆ. ಟಾಸ್ಕ್​ಫೋರ್ಸ್​ನ ಬದ್ಧತೆ ಏನೆಂಬುದನ್ನೂ ನ್ಯಾಯಾಲಯವೇ ಬಟಾಬಯಲು ಮಾಡಿರುವುದು ಸದ್ಯದ ಹೊಸ ಬೆಳವಣಿಗೆ.

ಒಂದು ವಾರ ನಡೆದ ವಿಧಾನಸಭೆ ಅಧಿವೇಶನದಲ್ಲಿ ಕರೊನಾ ಸಂಬಂಧಿತ ಖರೀದಿ ಬಗ್ಗೆ ಚರ್ಚೆಯಾಯಿತೇ ಹೊರತು ಕರೊನಾ ಮಟ್ಟಹಾಕಲು ಮಾಡಬೇಕಾದ ಕೆಲಸ, ಸರ್ಕಾರದ ಎಡವಟ್ಟುಗಳ ಬಗ್ಗೆ ಚರ್ಚೆಯೇ ನಡೆಯಲಿಲ್ಲ. ಸೆಪ್ಟೆಂಬರ್ ಆರಂಭದಲ್ಲಿ ಪ್ರತಿನಿತ್ಯ 5 ಸಾವಿರಗಳಷ್ಟಿದ್ದ ಪ್ರಕರಣಗಳ ಸಂಖ್ಯೆ ತಿಂಗಳಾಂತ್ಯದ ವೇಳೆಗೆ ಸರಾಸರಿ 9 ಸಾವಿರ ಸಮೀಪಿಸಿದೆ. ಸಾವಿನ ಪ್ರಮಾಣ ಕೂಡ ಗಾಬರಿ ಹುಟ್ಟಿಸುವಂತಿದೆ. ಕಳೆದ 5 ತಿಂಗಳಿಂದ ಮನೆಯೊಳಗಿದ್ದ ಜನ ಅನಿವಾರ್ಯವಾಗಿ ನಿತ್ಯ ಚಟು ವಟಿಕೆಗಳಿಗೆ ಮರಳುತ್ತಿರುವುದರಿಂದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದರೂ ಅಚ್ಚರಿ ಪಡಬೇಕಿಲ್ಲ.

ಎರಡು ಇಲಾಖೆ ಎರಡು ದಿಕ್ಕು: ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಆರೋಗ್ಯ ವ್ಯವಸ್ಥೆಯನ್ನು ಪ್ರತ್ಯೇಕವಾಗಿ ನಿರ್ವಹಿಸುತ್ತಿರುವುದು ಎಡವಟ್ಟುಗಳಿಗೆ ಕಾರಣ ವಾಗಿದೆ. ದೇಶದ ಯಾವ ರಾಜ್ಯದಲ್ಲಿಯೂ ಈ ಅವ್ಯವಸ್ಥೆ ಇಲ್ಲ. ಕೇಂದ್ರದಲ್ಲಿಯೂ ಈ ರೀತಿ ಎರಡು ಖಾತೆ ಇಲ್ಲ. ಇನ್ನು ಇಬ್ಬರು ಸಚಿವರ ಪೈಕಿ ಒಬ್ಬರು ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿದ್ದರೆ ಮತ್ತೊಬ್ಬರು ಇಲ್ಲದ ಸಮಸ್ಯೆ ಸೃಷ್ಟಿ ಮಾಡುತ್ತಿದ್ದ ಪರಿ ಸಂಕಷ್ಟಕ್ಕೆ ಕಾರಣ ವಾಯಿತು. ಕರೊನಾ ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಾದರೂ ಇಲಾಖೆಗಳನ್ನು ಒಂದು ಮಾಡಿದ್ದರೆ ಸಮಸ್ಯೆ ಸುಲಭವಾಗಿ ಬಗೆಹರಿಯುತ್ತಿತ್ತೇನೋ. ಎರಡು ಇಲಾಖೆಗಳ ಪರಿ ಣಾಮ ಒಂದೇ ರೀತಿಯ ಕೆಲಸಕ್ಕೆ ಇಬ್ಬಿಬ್ಬರು ಅಧಿಕಾರಿಗಳು, ಅದಕ್ಕೊಂದಷ್ಟು ಸಿಬ್ಬಂದಿ ಸೇರಿ ಸರ್ಕಾರಕ್ಕೆ ಆರ್ಥಿಕ ಹೊರೆ ಹೊರತು ಸಮಸ್ಯೆಗಳಿಗೆಪರಿಹಾರ ಸಾಧ್ಯವಾಗುತ್ತಿಲ್ಲ. ಇದನ್ನೂ ಓದಿ:  Web Exclusive: ಬಂಜರು ಭೂಮಿಗೆ ನ್ಯಾಯ ನೀಡಿದ ವಕೀಲ; ಬಂಗಾರದ ಬೆಳೆ ತೆಗೆದ ಸಾಧಕ

ರಾಜ್ಯದಲ್ಲಿ 42 ಜಿಲ್ಲಾಸ್ಪತ್ರೆಗಳಿದ್ದು, ಅದರಲ್ಲಿ ಹಲವು ಜಿಲ್ಲಾ ಆಸ್ಪತ್ರೆಗಳನ್ನು ವೈದ್ಯಕೀಯ ಶಿಕ್ಷಣ ಇಲಾಖೆ ವಶಕ್ಕೆ ಪಡೆದು ಮೆಡಿಕಲ್ ಕಾಲೇಜಿಗೆ ಪೂರಕವಾಗಿ ಬಳಸಿಕೊಳ್ಳುತ್ತಿದೆ.

ಕರೊನಾ ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಪ್ರಾಮುಖ್ಯತೆ ಹೆಚ್ಚಿದೆ. ಅಲ್ಲದೆ ಪರಿಸ್ಥಿತಿ ನಿಭಾಯಿಸುವುದು ಆರೋಗ್ಯ ಇಲಾಖೆ ಜವಾಬ್ದಾರಿ. ಆದರೆ, ಬಹುತೇಕ ಜಿಲ್ಲಾ ಆಸ್ಪತ್ರೆಗಳು ವೈದ್ಯಕೀಯ ಶಿಕ್ಷಣ ಇಲಾಖೆ ಅಡಿಯಲ್ಲಿ ಬರುವುದರಿಂದ ಆರೋಗ್ಯ ಇಲಾಖೆ ಹಸ್ತಕ್ಷೇಪ ಅಸಾಧ್ಯ. ಹೀಗಾಗಿ ಆರಂಭದಲ್ಲೇ ಒಂದಷ್ಟು ಗೊಂದಲ ಸೃಷ್ಟಿಯಾಯಿತು. ಆರೋಗ್ಯ ಸಚಿವ ಶ್ರೀರಾಮುಲು ಜವಾಬ್ದಾರಿ ತೆಗೆದುಕೊಳ್ಳದೆ ರಾಜ್ಯ ಪ್ರವಾಸ ಆರಂಭಿಸಿ ಪರಿಸ್ಥಿತಿ ನಿಯಂತ್ರಣ ಕಳೆದುಕೊಳ್ಳುವ ಹಂತ ತಲುಪಿದ ಬಳಿಕ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್​ಗೆ ಸರಕಾರ ಜವಾಬ್ದಾರಿ ಹೆಚ್ಚಿಸಿದ ಪರಿಣಾಮ ಮತ್ತೊಂದು ಹಂತಕ್ಕೆ ಪರಿಸ್ಥಿತಿ ಸುಧಾರಣೆಯಾಯಿತಾದರೂ ಎರಡು ಇಲಾಖೆಗಳ ಕಾರಣ ಶಾಶ್ವತ ಪರಿಹಾರವಂತೂ ಸಿಗಲಿಲ್ಲ. ಎರಡೂ ಇಲಾಖೆ ಬದಲು ಒಂದೇ ವ್ಯವಸ್ಥೆ ಇದ್ದರೆ ಒಂದೇ ತೀರ್ವನ, ಒಂದೇ ನಿಲುವು ಎಂಬಂತಾಗುತ್ತಿತ್ತು ಎಂಬುದು ಕರೊನಾ ಸಂಕಷ್ಟದ ಸಂದರ್ಭದಲ್ಲಿ ಬಯಲಾಗಿದೆ. ಕೆಲವು ಬೆಳವಣಿಗೆಯನ್ನು ಗಮನಿಸುವುದಾದರೆ, ಆರೋಗ್ಯ ಸಚಿವ ಶ್ರೀರಾಮುಲು ಮೆಡಿಕಲ್ ಟಮ್ರ್ ಬಗ್ಗೆ ತಿಳಿದುಕೊಳ್ಳಲು ಹೆಣಗಾಡಿದರು. ಮೂಲತಃ ವೈದ್ಯರಾದ ಡಾ.ಸುಧಾಕರ್ ಸಲೀಸಾಗಿ ಅರ್ಥೈಸಿಕೊಳ್ಳುತ್ತಾ ಹೋದರು. ಆರೋಗ್ಯ ಸಚಿವರ ವಿಷಯದಲ್ಲಿ ಖುದ್ದು ಸಿಎಂ ತಲೆಕೆಡಿಸಕೊಂಡರೂ ಪರಿಹಾರ ಮಾತ್ರ ಸಿಕ್ಕಿಲ್ಲ. ಇದನ್ನೂ ಓದಿ: ಅಪ್ಪನ ವಿರುದ್ಧ ಕೋರ್ಟ್​ಗೆ ಹೋದ ಮಗಳು: ಕಾರಣ ಕೇಳಿದ್ರೆ ನಗೋದು ಗ್ಯಾರಂಟಿ!

ವಿಲೀನವಾಗದಿದ್ದರೆ ನಿಲ್ಲಲ್ಲ ಸಂಕಷ್ಟ

ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಬಹುತೇಕ ಒಂದೇ ರೀತಿ ಕೆಲಸ ನಿರ್ವಹಿಸುತ್ತವೆ. ವೈದ್ಯಕೀಯ ಶಿಕ್ಷಣ ಇಲಾಖೆಗೆ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ನಿಭಾವಣೆ ಹೊರತು ಹೆಚ್ಚೇನು ಕೆಲಸವಿಲ್ಲ. ವರ್ಷಕ್ಕೊಮ್ಮೆ ಮೆಡಿಕಲ್ ಶುಲ್ಕ ನಿಗದಿ ಮಾಡುತ್ತದೆ. ಅಲ್ಲದೆ ಮೆಡಿಕಲ್ ಕಾಲೇಜನ್ನು ನಿಭಾಯಿಸಲು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಸಮರ್ಥವಾಗಿ ಬೆಳೆದುನಿಂತಿದೆ. ಎಸ್ಸೆಂ ಕೃಷ್ಣ ಮುಖ್ಯಮಂತ್ರಿಯಾಗಿದ್ದ ವೇಳೆ ಸಚಿವರ ಸಂಖ್ಯೆಯನ್ನು ಹೆಚ್ಚಳ ಮಾಡಿಕೊಳ್ಳುವ ಒಂದೇ ಕಾರಣಕ್ಕೆ ವೈದ್ಯಕೀಯ ಶಿಕ್ಷಣವನ್ನು ಆರೋಗ್ಯ ಇಲಾಖೆಯಿಂದ ಬೇರ್ಪಡಿಸಿ ಆ ದಿನಗಳ ರಾಜಕೀಯ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದು ಇದೀಗ ಜನರ ಜೀವ ತೆಗೆಯುವ ಹಂತ ತಲುಪಿದೆ.

ಸರ್ಕಾರದ ತಪ್ಪುಗಳು
  • ಕರೊನಾ ಅಂಕಿಸಂಖ್ಯೆ ಬಗ್ಗೆ ತಲೆಕೆಡಿಸಿಕೊಂಡಿದ್ದು ಬಿಟ್ಟರೆ, ನೈಜವಾಗಿ ಗಮನಿಸಬೇಕಾದ ವಿಷಯಗಳ ಬಗ್ಗೆ ಗಮನಹರಿಸಲೇ ಇಲ್ಲ. ಉಪಕರಣ ಖರೀದಿಗೆ ನೀಡಿದ ಆದ್ಯತೆ ಮತ್ತು ಆಸಕ್ತಿಯನ್ನು ತಳಮಟ್ಟದಲ್ಲಿ ನಿರ್ವಹಣೆಗೆ ನೀಡಿದ್ದರೆ ಪರಿಸ್ಥಿತಿ ಕೈಮೀರುತ್ತಿರಲಿಲ್ಲ ಎಂಬುದು ತಜ್ಞರ ಅಭಿಪ್ರಾಯ.
  • ಕರೊನಾ ನಿರ್ವಹಣೆ ನೇತೃತ್ವ ವಿಚಾರವೇ ಸರ್ಕಾರದಲ್ಲಿ ಪ್ರತಿಷ್ಠೆಯಾಯಿತು. ವೈದ್ಯರೂ ಆದ ಡಿಸಿಎಂ ಅಶ್ವತ್ಥನಾರಾಯಣ ಆರಂಭದಲ್ಲಿ ಒಂದಷ್ಟು ಆಸಕ್ತಿ ತೋರಿದ್ದರು. ಬಳಿಕ ಆರೋಗ್ಯ ಸಚಿವರಿಗೆ ಜವಾಬ್ದಾರಿ ನೀಡಿದರೂ ಸಂಕಷ್ಟ ಹೆಚ್ಚಾಗಿ ವೈದ್ಯಕೀಯ ಶಿಕ್ಷಣ ಸಚಿವರು ಮುನ್ನೆಲೆಗೆ ಬಂದರೂ ಎರಡೆರಡು ಇಲಾಖೆಗಳ ಪರಿಣಾಮ ಸಮಸ್ಯೆ ಸವಾಲಾಗಿ ಪರಿಣಮಿಸಿದೆ.
  • ಕೋವಿಡ್ ಆಸ್ಪತ್ರೆಗಳ ನಿರ್ವಹಣೆ 2 ಇಲಾಖೆಗಳಿಂದ ನಡೆದು ಗೊಂದಲ ಸೃಷ್ಟಿಯಾಯಿತು. ಎರಡೂ ಕಡೆ ಅಧಿಕಾರಿಗಳ ಸಂಖ್ಯೆಯೂ ಹೆಚ್ಚಿ ಅಗತ್ಯ ಮುನ್ನೆಚ್ಚರಿಕೆ ಸಾಧ್ಯವಾಗಲೇ ಇಲ್ಲ. ಹೊಂದಾಣಿಕೆ ಸಮಸ್ಯೆಯಿಂದಾಗಿ ಮೊದಲು ಬೆಡ್, ನಂತರ ವೆಂಟಿಲೆಟರ್, ಬಳಿಕ ಆಂಬುಲೆನ್ಸ್, ಆಕ್ಸಿಜನ್ ಹೀಗೆ ಸರಣಿ ಸಂಕಷ್ಟಗಳು ಸೃಷ್ಟಿಯಾದವು. ಸರ್ಕಾರಕ್ಕೆ ವೆಚ್ಚವೂ ಹೆಚ್ಚಾಯಿತು.
  • ಟ್ರೇಸ್, ಟೆಸ್ಟ್, ಟ್ರಾಕ್, ಟ್ರೀಟ್​ವೆುಂಟ್(4ಟಿ) ಸೂತ್ರ ರಚಿಸಿದ ಹೆಗ್ಗಳಿಕೆ ಕರ್ನಾಟಕದ್ದು, ಪ್ರಧಾನಿ ಮೋದಿ ಅವರಿಂದ ಇದಕ್ಕೆ ಶಹಬ್ಬಾಸ್​ಗಿರಿ ಸಿಕ್ಕರೂ ಹೊಸ ಸೂತ್ರ ಕೆಳ ಹಂತದಲ್ಲಿ ಸಮರ್ಪಕವಾಗಿ ಅನುಷ್ಠಾನವಾಗಲಿಲ್ಲ. ಪರಿಸ್ಥಿತಿ ಗಂಭೀರ ವಾಗಿದ್ದಾಗ ಕೋವಿಡ್ ಪಾಸಿಟಿವ್ ವರದಿ ಬಂದವರ ಮನೆಗೂ ಆರೋಗ್ಯ ಸಿಬ್ಬಂದಿ ಹೋಗಲಿಲ್ಲ. ಇಂದಿಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸೆ ಸಿಕ್ಕುತ್ತಿಲ್ಲ ಎಂಬ ಅಪವಾದ ದೂರವಾಗಿಲ್ಲ.
ಹೈಕೋರ್ಟ್ ಛೀಮಾರಿ

ಮೂವರು ಸಚಿವರು ಇರುವ ಉನ್ನತ ಮಟ್ಟದ ಕರೊನಾ ನಿರ್ವಹಣಾ ಸಮಿತಿಯ ಕಾರ್ಯನಿರ್ವಹಣೆ ಬಗ್ಗೆಯೇ ಅನುಮಾನ ಮೂಡುತ್ತಿದೆ. ಹೈಕೋರ್ಟ್ ಕೂಡ ಈ ಸಮಿತಿಯ ಕಾರ್ಯನಿರ್ವಹಣೆ ಸರಿಯಾಗಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಸುಪ್ರಿಂಕೋರ್ಟ್ ಹೊರಡಿಸಿದ ನಿರ್ದೇಶನದ ಮೇರೆಗೆ ರಚನೆಗೊಂಡ ತಜ್ಞರ ಸಮಿತಿ ತನ್ನ ಜವಾಬ್ದಾರಿ ಸರಿಯಾಗಿ ನಿರ್ವಹಿಸಿಲ್ಲ ಎಂಬುದು ಗಮನಾರ್ಹ ಸಂಗತಿ. ಕಣ್ಣು, ಕಿವಿ, ಮೂಳೆ ವೈದ್ಯರನ್ನೊಳಗೊಂಡ ತಂಡ ವೈರಾಲಜಿಗೆ ಸರಿಯಾದ ಆದ್ಯತೆಯನ್ನೇ ನೀಡಿಲ್ಲ ಎಂಬ ಟೀಕೆಯೂ ಇದೆ. ಕೋವಿಡ್ ಆಸ್ಪತ್ರೆಗಳಲ್ಲಿ ಸೌಲಭ್ಯಗಳ ಕೊರತೆ ಇಲ್ಲ, ಎಲ್ಲವೂ ಸರಿ ಇದೆ ಎಂಬ ತಜ್ಞರ ವರದಿಯನ್ನೂ ನ್ಯಾಯಾಲಯ ಮುಲಾಜಿಲ್ಲದೆ ತಿರಸ್ಕರಿಸಿದೆ. ಈ ಸಮಿತಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಿಲ್ಲ ಎಂಬುದು ನ್ಯಾಯಪೀಠ ಗಮನಿಸಿದ್ದು, ಸರ್ಕಾರಕ್ಕೆ ಎಚ್ಚರಿಕೆಯನ್ನೂ ನೀಡಿದೆ. ಈ ಮೂಲಕ ಕೆಳಹಂತದ ವ್ಯವಸ್ಥೆ ಜತೆಗೆ ಮೇಲು ಹಂತದ ನಿರ್ವಹಣೆ ಸರಿಯಾಗಿಲ್ಲ ಎಂಬುದು ಸ್ಪಷ್ಟವಾದಂತಾಗಿದೆ.