ಮೂಡುಬಿದಿರೆ: ಕಡಲಕೆರೆಯ ಕೈಗಾರಿಕಾ ವಲಯದಲ್ಲಿರುವ ದಿನಸಿ ಸಾಮಗ್ರಿಗಳ ದಾಸ್ತಾನು ಗೋಡೌನ್‌ಗೆ ನುಗ್ಗಿ ಲ್ಯಾಪ್‌ಟಾಪ್ ಮತ್ತು ನಗದು ಕಳ್ಳತನ ಮಾಡಿದ್ದ ಡಿಬಿಎಲ್ ಕಂಪೆನಿ ನೌಕರನನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ರಾಯಚೂರು ತಡಕಲ್ ಗ್ರಾಮದ ಚಂದ್ರು(33) ಬಂಧಿತ ಆರೋಪಿ. ಮಂಗಳೂರು-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಗುತ್ತಿಗೆ ವಹಿಸಿಕೊಂಡ ಡಿಬಿಎಲ್ ಕಂಪನಿ ಕಾರ್ಮಿಕ ಎನ್ನಲಾಗಿದ್ದು, ಕಡಲಕೆರೆಯಲ್ಲಿ ಪತ್ನಿ ಮಕ್ಕಳ ಜತೆ ಬಾಡಿಗೆ ಮನೆಯಲ್ಲಿ ವಾಸವಿದ್ದ ಎನ್ನಲಾಗಿದೆ. ಇದರ ಹತ್ತಿರದಲ್ಲೆ ವಿಲ್‌ಕಾರ್ಟ್ ಎಂಬ ಗೋಡೌನ್ ಇದ್ದು, ಏ.26ರಂದು ರಾತ್ರಿ ಆರೋಪಿ ಗೋಡೌನ್ ಶಟರಿನ ಬೀಗ ಮುರಿದು ಒಳನುಗ್ಗಿ 2 ಲ್ಯಾಪ್‌ಟಾಪ್ ಹಾಗೂ ಸುಮಾರು 2.80 ಲಕ್ಷ ನಗದು ಕಳ್ಳತನ ಮಾಡಿದ್ದ. ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಯನ್ನು ಮೂಡುಬಿದಿರೆ ಪೊಲೀಸರು ಬಂಧಿಸಿ ಸ್ವತ್ತು, ನಗದು ಮತ್ತು ಕೃತ್ಯಕ್ಕೆ ಬಳಸಿದ ಪಿಕ್‌ಅಪ್ ವಾಹನ ವಶಕ್ಕೆ ಪಡೆದಿದ್ದಾರೆ. ಕೋರ್ಟ್‌ಗೆ ಹಾಜರುಪಡಿಸಿದ್ದು ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆರೋಪಿ ವಿರುದ್ಧ ರಾಯಚೂರು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಸುಮಾರು 60 ಕ್ರಿಮಿನಲ್ ಪ್ರಕರಣ ದಾಖಲಾಗಿದೆ.