

ವಿಜಯವಾಣಿ ಸುದ್ದಿಜಾಲ ಬದಿಯಡ್ಕ
ರಸ್ತೆ ಬದಿಯಲ್ಲಿ ತ್ಯಾಜ್ಯಗಳನ್ನು ಎಸೆಯುವ ಮೂಲಕ ಪರಿಸರದ ಸ್ವಾಸ್ಥ್ಯ ಕದಡುವ ಕಿಡಿಗೇಡಿಗಳನ್ನು ಮಟ್ಟಹಾಕುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಬದಿಯಡ್ಕ ಪರಿಸರದಲ್ಲಿ ತ್ಯಾಜ್ಯದ ದುರ್ಗಂಧ ಹರಡಿದೆ. ಪರಿಸರದ ಯಾವುದೇ ರಸ್ತೆಯಲ್ಲಿ ಸಂಚರಿಸುವಾಗಲೂ ತ್ಯಾಜ್ಯ ರಾಶಿಯೇ ಕಣ್ಣಿಗೆ ಗೋಚರವಂತಾಗಿದೆ.
ಈಗಾಗಲೇ ಮಳೆಬೀಳಲು ಆರಂಭವಾಗಿದ್ದು, ನಿರಂತರ ಮಳೆ ಸುರಿಯುವ ಮೊದಲು ಶುಚಿಗೊಳಿಸದಿಲ್ಲದ್ದಲ್ಲಿ ಪರಿಸರವೆಲ್ಲ ದುರ್ಗಂಧ ಬೀರುವ ಆತಂಕದ ಜತೆಗೆ ಸಾಂಕ್ರಾಮಿಕ ರೋಗ ಭೀತಿ ಎದುರಾಗಲಿದೆ. ಕೆಲವೊಂದು ಕಡೆಗಳಲ್ಲಿ ‘ಇದು ಮಾಲಿನ್ಯ ಮುಕ್ತ ಪ್ರದೇಶವಾಗಿದೆ, ಇಲ್ಲಿ ತ್ಯಾಜ್ಯಗಳನ್ನು ಎಸೆಯಬಾರದು’ ಎಂಬ ನಾಮಫಲಕವನ್ನು ಅಳವಡಿಸಲಾಗಿದ್ದು, ಅದರ ಬುಡದಲ್ಲೇ ತ್ಯಾಜ್ಯ ರಾಶಿ ಬಿದ್ದಿದೆ. ಕೋಳಿಯ ತ್ಯಾಜ್ಯ, ವಿವಿಧ ಸಮಾರಂಭಗಳಲ್ಲಿ ಉಪಯೋಗಿಸಿದ ಪ್ಲಾಸ್ಟಿಕ್ ಪ್ಲೇಟ್, ಬಾಟಲ್ಗಳನ್ನು ಈ ರಾಶಿಯಲ್ಲಿ ಕಾಣಬಹುದು.
ತ್ಯಾಜ್ಯದ ದುರ್ಗಂಧ
ಬದಿಯಡ್ಕ ಕುಂಬಳೆ ರಸ್ತೆಯ ಬದಿಯಲ್ಲಿ ಅನೇಕ ಕಡೆಗಳಲ್ಲಿ ತ್ಯಾಜ್ಯದ ದುರ್ಗಂಧ ಹರಡಿದೆ. ಪೊಲೀಸ್ ಠಾಣೆ ನಂತರ ಕನ್ನೆಪ್ಪಾಡಿ ಭಾಗದ ಅನೇಕ ಕಡೆಗಳಲ್ಲಿ ಪ್ಲಾಸ್ಟಿಕ್ ಕವರ್ನಲ್ಲಿ ತ್ಯಾಜ್ಯಗಳನ್ನು ತುಂಬಿಸಿ ರಸ್ತೆಯ ಬದಿಯಲ್ಲಿ ಎಸೆದಿರುವುದು ಕಂಡುಬರುತ್ತಿದೆ. ಇಲ್ಲಿನ ದೊಡ್ಡ ತಿರುವಿನಲ್ಲಿ ರಸ್ತೆಯ ಬದಿಗೆ ತ್ಯಾಜ್ಯಗಳನ್ನು ಎಸೆಯಲಾಗುತ್ತಿದೆ. ತ್ಯಾಜ್ಯ ರಾಶಿಗೆ ಮಳೆನೀರು ಬಿದ್ದು ಅದು ಕೊಳೆತು ಸೊಳ್ಳೆಗಳ ಉತ್ಪಾದನೆಯಾಗುವ ಸಾಧ್ಯತೆ ದಟ್ಟವಾಗಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳೂ ಗಮನಹರಿಸಿ ತುರ್ತು ಕ್ರಮಕೈಗೊಳ್ಳಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.
ಸಾರ್ವಜನಿಕರ ಸಹಕಾರ ಅಗತ್ಯ
ಸರಕಾರದ ಸ್ವಚ್ಛ ಭಾರತ್ ಮಿಷನ್, ನವಕೇರಳ ಸ್ವಚ್ಛತಾ ಮಿಷನ್ ಪ್ರಾಜೆಕ್ಟ್ಗಳು ನಿರಂತರ ನಡೆಯುತ್ತಿದ್ದರೂ ಪರಿಸರದ ಜನರ ಸಹಕಾರವಿದ್ದರೆ ಮಾತ್ರ ಇದೆಲ್ಲವೂ ಸಮರ್ಪಕವಾದ ನಿರ್ವಹಿಸಲು ಸಾಧ್ಯ. ವೈದ್ಯಕೀಯ ತ್ಯಾಜ್ಯ, ವಾಂಸದ ಅಂಗಡಿಗಳ ತ್ಯಾಜ್ಯ, ಹೋಟೆಲ್ ಸಹಿತ ವಿವಿಧ ವ್ಯಾಪಾರ ಕೇಂದ್ರಗಳ ತ್ಯಾಜ್ಯಗಳ ಸಮರ್ಪಕ ನಿರ್ವಹಣೆಗೆ ಆಯಾ ವಲಯದ ಮಾಲೀಕರಿಗೆ ಇನ್ನೂ ಅರಿವು ಮೂಡದಿರುವುದು ವಿಪರ್ಯಾಸ. ಬದಿಯಡ್ಕ ಗ್ರಾಮಪಂಚಾಯಿತಿ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಪ್ಲಾಸ್ಟಿಕ್ ಬಾಟಲ್ ಸಂಗ್ರಹಣಾ ಪೆಟ್ಟಿಗೆಯನ್ನು ಇರಿಸಲಾಗಿದೆ. ಪೇಟೆಗಳಲ್ಲಿ ಸ್ವಚ್ಛತಾ ಕಾರ್ಮಿಕರು ನಿತ್ಯ ಬೆಳಗಿನ ಜಾವ ಸ್ವಚ್ಛತಾ ಕಾರ್ಯಗಳನ್ನು ನಡೆಸುತ್ತಿದ್ದಾರೆ. ಆದರೆ ರಸ್ತೆ ಬದಿಯ ತ್ಯಾಜ್ಯಗಳ ರಾಶಿ ನಾಗರಿಕರಿಗೆ ಸಮಸ್ಯೆಯನ್ನುಂಟುಮಾಡುತ್ತಿದ್ದರೂ ಅಧಿಕಾರಿಗಳು ದಿವ್ಯ ಮೌನ ವಹಿಸಿರುವುದು ವಿಪರ್ಯಾಸ.
ನೀರ್ಚಾಲು, ಬದಿಯಡ್ಕ ಬಸ್ ನಿಲ್ದಾಣ ಹಾಗೂ ಮೇಲಿನ ಪೇಟೆಗಳಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಪ್ಲಾಸ್ಟಿಕ್ ಬಾಟಲ್ಗಳ ಸಂಗ್ರಹಣೆಗಾಗಿ ವಿಶೇಷ ಪೆಟ್ಟಿಗೆಯನ್ನು ಇರಿಸಲಾಗಿದೆ. ಮುಂದೆ ಸಾರ್ವಜನಿಕರು ಹೆಚ್ಚಾಗಿ ಸೇರುವ ಸುಮಾರು 20 ಕಡೆಗಳಲ್ಲಿ ಕಸದ ತೊಟ್ಟಿಗಳನ್ನು ಇರಿಸಲಾಗುವುದು. ಪ್ಲಾಸ್ಟಿಕ್ ಸಂಗ್ರಹಣಾ ಕೇಂದ್ರಗಳಲ್ಲಿ ಪ್ಲಾಸ್ಟಿಕ್ ಸಂಸ್ಕರಣಾ ಯಂತ್ರದ ಮೂಲಕ ಸಂಸ್ಕರಿಸಲು ಅಗತ್ಯ ಕ್ರಮಕೈಗೊಳ್ಳಲಾಗಿದೆ. ಸೂಕ್ಷ್ಮಪ್ರದೇಶಗಳಲ್ಲಿ ಸಿಸಿ ಕ್ಯಾಮರಾಗಳನ್ನು ಇರಿಸಿ ನಿಗಾವಹಿಸಲಾಗುವುದು. ಮಾನ್ಯ, ಕುಂಜಾರು, ಕೊರತ್ತಿಗುಳಿ, ಬಾರಡ್ಕ, ಮಾಯಿಂಲಕೋಡಿ ಮೊದಲಾದ ಕಡೆಗಳಲ್ಲಿ ಮೊದಲಿಗೆ ಈ ಕ್ರಮಕೈಗೊಳ್ಳಲಾಗುವುದು. ಎಂ.ಅಬ್ಬಾಸ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸ್ವಚ್ಛ ಸುಂದರ ಪರಿಸರ ನಿರ್ಮಾಣಕ್ಕೆ ನಾಡಿನ ಜನರ ಸಹಭಾಗಿತ್ವ ಅತೀ ಅಗತ್ಯ. ಕೇವಲ ಅಧಿಕಾರಿಗಳಿಂದ ಮಾತ್ರ ಏನನ್ನೂ ಮಾಡಲು ಸಾಧ್ಯವಿಲ್ಲ. ಅಲ್ಲಲ್ಲಿ ಕಸ, ತ್ಯಾಜ್ಯಗಳನ್ನು ಎಸೆಯದೇ ನಾಡಿನ ಸ್ವಾಸ್ಥ್ಯ ಕಾಪಾಡುವುದಕ್ಕೆ ಎಲ್ಲರೂ ಕೈಜೋಡಿಸಬೇಕು. ಬಾಲಕೃಷ್ಣ ಶೆಟ್ಟಿ ಕಡಾರು ಗ್ರಾಮ ಪಂಚಾಯಿತಿ ಸದಸ್ಯ https://www.vijayavani.net/concrete-road-is-poor https://www.vijayavani.net/peoples-lives-are-suffering-due-to-price-hikes