ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ
ಹಬ್ಬ ಹರಿದಿನಗಳಲ್ಲಿ ನಾವೆಲ್ಲ ಒಂದಾಗುವ ಸಂಪ್ರದಾಯ ಮುಂದುವರಿಸಿಕೊಂಡು ಹೋಗಿ ಸಂಸ್ಕೃತಿ ಉಳಿಸಿಕೊಳ್ಳಬೇಕು. ದುಡಿದ ಒಂದಂಶವನ್ನು ಸಮಾಜಸೇವೆ, ಧಾರ್ಮಿಕ ಕಾರ್ಯಕ್ರಮಗಳಿಗೆ ಮೀಸಲಿಡಬೇಕು. ಇಂದು ಮೊಬೈಲ್, ಟಿವಿ ಹಾವಳಿಯಿಂದ ಸಂಪ್ರದಾಯಗಳು ಮಾಯವಾಗಿವೆ. ನಮಸ್ತೆ ಭಾರತ್ ಟ್ರಸ್ಟ್ ಕಾರ್ಯ ಶ್ಲಾಘನಾರ್ಹ ಎಂದು ಎಂ.ಎಸ್.ಮಂಜ ಚಾರಿಟೆಬಲ್ ಟ್ರಸ್ಟ್‌ನ ಕೃಷ್ಣಮೂರ್ತಿ ಮಂಜ ಮಾರಣಕಟ್ಟೆ ಹೇಳಿದರು.
ಮಂದಾರ್ತಿಯಲ್ಲಿ ನಮಸ್ತೆ ಭಾರತ್ ಟ್ರಸ್ಟ್ ವತಿಯಿಂದ ಶನಿವಾರ ಆಯೋಜಿಸಲಾಗಿದ್ದ ಸಂಕೀರ್ತನಾ ಮಂದಾರ್ತಿ ರಾಷ್ಟ್ರಮಟ್ಟದ ಕುಣಿತ ಭಜನಾ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಸ್ಥೆಯ ಸಂಸ್ಥಾಪಕ ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ, ದೇವರೊಂದಿಗೆ ನೇರ ಸಂಪರ್ಕ ಭಜನೆ ಮೂಲಕ ಸಾಧ್ಯ. ದೇವರು, ದೇಶದ ಆರಾಧನೆ ಮಾಡುವ ಬಗ್ಗೆ ನಮ್ಮ ಮುಂದಿನ ಪೀಳಿಗೆಗೆ ತಿಳಿಸಿಕೊಡಬೇಕು. ಹಣಕೋಸ್ಕರ ಭಜನಾ ಸಂಪ್ರದಾಯ ಬೆಳೆಯದೆ ದೇವರ ಮೇಲಿನ ಭಕ್ತಿ ಸ್ವರೂಪದ ಚಿಂತನೆ ಮೂಡಿಸುವಂತಾಗಬೇಕು ಎಂದರು.
ಬೆಂಗಳೂರಿನ ಎಂ.ಆರ್.ಜಿ. ಸಮೂಹ ಸಂಸ್ಥೆಯ ಡಾ.ಪ್ರಕಾಶ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಉದಯ ಕುಮಾರ ಶೆಟ್ಟಿ, ಮಲ್ಪೆಯ ಸಾಧು ಸಾಲಿಯಾನ್, ಮಂದಾರ್ತಿ ದೇವಳದ ಆಡಳಿತ ಮೊಕ್ತೇಸರ ಎಚ್.ಧನಂಜಯ ಶೆಟ್ಟಿ, ಅರ್ಚಕ ಶ್ರೀಪತಿ ಅಡಿಗ, ವಿಜಯನಾಥ ಹೆಗ್ಡೆ, ಎಚ್.ಶೇಡಿಕೊಡ್ಲು ವಿಠಲ ಶೆಟ್ಟಿ, ಪ್ರಶಾಂತ ಶೆಟ್ಟಿ ವಂಡಾರು, ಸುನೀಲ್ ಸೋನಿ ಉಪಸ್ಥಿತರಿದ್ದರು.
ಪ್ರಮೋದ್ ಮಂದಾರ್ತಿ ಪ್ರಸ್ತಾವನೆಗೈದರು. ಪತ್ರಕರ್ತ ಕೆ.ಸಿ.ರಾಜೇಶ್ ಕಾರ್ಯಕ್ರಮ ನಿರೂಪಿಸಿದರು. ಮಧ್ಯಾಹ್ನ ಶೋಭಾಯಾತ್ರೆಗೆ ಶಂಕರ ಹೆಗ್ಡೆ ಜನ್ನಾಡಿ, ಗೋಪಿನಾಥ ಕಾಮತ್ ಚಾಲನೆ ನೀಡಿದರು. ಉಡುಪಿ, ದಕ್ಷಿಣ ಕನ್ನಡ ಸಹಿತ ಉತ್ತರ ಕನ್ನಡ, ಸಾಗರ, ಶಿವಮೊಗ್ಗ, ತೀರ್ಥಹಳ್ಳಿ ಕಡೆಗಳಿಂದ ಭಜನಾ ತಂಡಗಳು ಸ್ಪರ್ಧಿಸಿದ್ದವು. ಒಟ್ಟು ಐದು ವೇದಿಕೆಗಳಲ್ಲಿ ಕಾರ್ಯಕ್ರಮ ನಡೆಯಿತು.
ಸ್ಪರ್ಧೆಯಲ್ಲಿ 108 ಭಜನಾ ತಂಡಗಳು ಭಾಗವಹಿಸಿದ್ದವು. ವಿಜೇತರಿಗೆ ಪ್ರಥಮ ಒಂದು ಲಕ್ಷ ರೂ., ದ್ವಿತೀಯ ಐವತ್ತು ಸಾವಿರ ರೂ., ತೃತೀಯ ನಲುವತ್ತು ಸಾವಿರ ರೂ., ಚತುರ್ಥ ಸ್ಥಾನಕ್ಕೆ ಮೂವತ್ತು ಸಾವಿರ ರೂ., ಪಂಚಮ ಸ್ಥಾನಕ್ಕೆ ಇಪ್ಪತ್ತು ಸಾವಿರ ರೂ. ನಗದು ಬಹುಮಾನ, ಪ್ರಶಂಸಾ ಪತ್ರ ನೀಡಲಾಯಿತು. ಭಾಗವಹಿಸಿದ ಪ್ರತಿ ತಂಡಕ್ಕೆ ಐದು ಸಾವಿರ ರೂ. ಪುರಸ್ಕಾರ ನೀಡಲಾಯಿತು.
ಸಾಣೂರು ಆಂಜನೇಯ ಭಜನಾ ಮಂಡಳಿ ಪ್ರಥಮ ಸ್ಥಾನ ಪಡೆದಿದ್ದು, ತೆಂಕಮಿಜಾರಿನ ರಾಧಾಕೃಷ್ಣ ಭಜನಾ ಮಂಡಳಿ ದ್ವಿತೀಯ ಸ್ಥಾನಿಯಾಯಿತು. ಪೆರ್ಡೂರು ಪಾಡಿಗಾರದ ಶ್ರೀರಾಮ ಭಜನಾ ಮಂಡಳಿ ತೃತೀಯ ಸ್ಥಾನ ಪಡೆದಿದ್ದು, ಕಡ್ತಲ ಸಿರಿಬೈಲು ದುರ್ಗಾಪರಮೇಶ್ವರಿ ಭಜನಾ ಮಂಡಳಿ ಚತುರ್ಥ ಹಾಗೂ ಮುಂಡ್ಕೂರು ಸೇವಾ ಭಾರತಿ ಭಜನಾ ಮಂಡಳಿ ಪಂಚಮ ಸ್ಥಾನ ಪಡೆದುಕೊಂಡವು.