ಜಿಲ್ಲೆ

ವಿದ್ಯುತ್ ಉಪಕೇಂದ್ರದ ಪ್ರಕ್ರಿಯೆ ಶೀಘ್ರ ಪೂರ್ಣ

Avinash R

ಉಪ್ಪಿನಂಗಡಿ: ನೆಕ್ಕಿಲಾಡಿ ಗ್ರಾಮದ ಕರ್ವೇಲುವಿನಲ್ಲಿ ನಿರ್ಮಾಣವಾಗಲಿರುವ 110 ಕೆ.ವಿ. ವಿದ್ಯುತ್ ಉಪಕೇಂದ್ರದ ಪ್ರಕ್ರಿಯೆ ಶೀಘ್ರವೇ ಪೂರ್ಣಗೊಳಿಸಿ, ಅಲ್ಲಿ ವಿದ್ಯುತ್ ಉಪಕೇಂದ್ರ ನಿರ್ಮಿಸಬೇಕು. ಉಪ್ಪಿನಂಗಡಿ ಮೆಸ್ಕಾಂ ಶಾಖೆಯನ್ನು ಉಪವಿಭಾಗವನ್ನಾಗಿ ಮೇಲ್ದರ್ಜೆಗೇರಿಸಿ, ಇದರಡಿ ಆತೂರು ಮತ್ತು ಗೋಳಿತೊಟ್ಟುವಿನಲ್ಲಿ ಎರಡು ಶಾಖೆ ಆರಂಭಿಸಬೇಕು ಎಂದು 34ನೇ ನೆಕ್ಕಿಲಾಡಿ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಕೇಳಿಕೊಂಡರು.

34 ನೆಕ್ಕಿಲಾಡಿ ಗ್ರಾ.ಪಂ ಅಧ್ಯಕ್ಷೆ ಸುಜಾತಾ ಆರ್.ರೈ ಅಧ್ಯಕ್ಷತೆಯಲ್ಲಿ ಗ್ರಾ.ಪಂ ಸಭಾಂಗಣದಲ್ಲಿ ಆಯೋಜಿಸಲಾದ ಗ್ರಾಮಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಗ್ರಾಮಸ್ಥರು, ಉಪ್ಪಿನಂಗಡಿ ಮೆಸ್ಕಾಂ ಶಾಖೆಯು 9 ಗ್ರಾಮಗಳನ್ನೊಳಗೊಂಡ ವಿಶಾಲ ಕಾರ್ಯವ್ಯಾಪ್ತಿ ಹೊಂದಿದೆ. ಇದರ ವಿಶಾಲ ಕಾರ್ಯವ್ಯಾಪ್ತಿಯನ್ನು ಕುಗ್ಗಿಸಿ ಉತ್ತಮ ಸೇವೆ ದೊರಕುವಂತೆ ಮಾಡಬೇಕೆಂದರು.

ಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ್ ಚರ್ಚಾ ನಿಯಂತ್ರಣಾಧಿಕಾರಿಯಾಗಿ ಸಭೆ ಮುನ್ನಡೆಸಿದರು. ಗ್ರಾ.ಪಂ ಉಪಾಧ್ಯಕ್ಷ ಹರೀಶ್ ಡಿ, ಸದಸ್ಯರಾದ ಪ್ರಶಾಂತ ಎನ್, ಸ್ವಪ್ನಾ, ತುಳಸಿ, ರತ್ನಾವತಿ, ರಮೇಶ್ ನಾಯ್ಕ, ವೇದಾವತಿ, ಗೀತಾ, ಹರೀಶ್ ಕೆ, ವಿಜಯಕುಮಾರ್ ಉಪಸ್ಥಿತರಿದ್ದರು. ವಿವಿಧ ಇಲಾಖಾಧಿಕಾರಿಗಳು ಮಾಹಿತಿ ನೀಡಿದರು.

ಗ್ರಾ.ಪಂ ಲೆಕ್ಕ ಸಹಾಯಕ ದೇವಪ್ಪ ನಾಯ್ಕ ಸ್ವಾಗತಿಸಿದರು. ಪಿಡಿಒ ಸತೀಶ ಬಂಗೇರ ವರದಿ ವಾಚಿಸಿದರು. ಸಿಬ್ಬಂದಿಗಳಾದ ವಸಂತಿ, ನಿತಿನ್ ಕುಮಾರ್ ಸಹಕರಿಸಿದರು.

ಖಾಸಗಿಯವರಿಂದ ದಾರಿಗೆ ಅಡ್ಡಿ

ನೆಕ್ಕಿಲಾಡಿ ಶಾಲೆಯ ಬಳಿ ಹಿಂದಿನಿಂದಲೂ ಇದ್ದ ದಾರಿಯೊಂದನ್ನು ಸ್ಥಳೀಯ ನಿವಾಸಿ ಮುಚ್ಚಿದ್ದು ಅದನ್ನು ಸರಿಪಡಿಸಬೇಕು. ಗ್ರಾಮದಲ್ಲಿ ಹಲವು ವರ್ಷಗಳ ಹಿಂದೆ ಅಪ್ರಾಪ್ತ ಬಾಲಕಿಯೋರ್ವಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು, ಆಕೆಗೆ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಆದರೆ ಪರಿಹಾರ ಒದಗಿಸುವ ಹೊಣೆ ಯಾವ ಇಲಾಖೆಯದ್ದೆಂದು ತಿಳಿಸಿಲ್ಲ. ಹಾಗಾಗಿ ಯಾರು ಪರಿಹಾರ ನೀಡುವುದೆಂಬ ಪ್ರಶ್ನೆ ಉದ್ಭವಿಸಿದೆ ಎಂಬೆಲ್ಲಾ ವಿಚಾರಗಳು ಸಭೆಯಲ್ಲಿ ಪ್ರಸ್ತಾಪಿಸಲ್ಪಟ್ಟಿತ್ತು.

ಹಲವು ಬೇಡಿಕೆ, ಪ್ರಶ್ನೆಗಳ ಸುರಿಮಳೆ

ಗ್ರಾಮದ ಮೈಂದಡ್ಕದಲ್ಲಿ ನಾವು ಸೇರಿ ಅಂಗನವಾಡಿಗೆಂದು ಕಟ್ಟಡ ಕಟ್ಟಿಕೊಟ್ಟಿದ್ದೇವೆ. ಆದರೆ ಅಲ್ಲಿ ಅಂಗನವಾಡಿ ಕಾರ್ಯಕರ್ತೆಯ ನಿಯೋಜನೆಯಾಗಿಲ್ಲ. ದರ್ಬೆ ರಸ್ತೆ ಹದಗೆಟ್ಟಿದ್ದು ದುರಸ್ತಿ ಮಾಡುತ್ತಿಲ್ಲ ಯಾಕೆ ?. ಎಲ್ಲ ಧರ್ಮದ ಶ್ರದ್ಧಾಕೇಂದ್ರದ ಬಳಿ ಹೈಮಾಸ್ಟ್ ಸೋಲಾರ್ ದೀಪ ಅಳವಡಿಸಬೇಕು. ಪುತ್ತೂರು ನಗರಕ್ಕೆ ನೀರು ಒದಗಿಸುವ ನೆಕ್ಕಿಲಾಡಿ ಗ್ರಾಮದ ಜನತೆ ಜಲಸಿರಿ ಶುದ್ಧ ನೀರು ಬೇಕು. ಗ್ರಾ.ಪಂ ನೂತನ ಗ್ರಂಥಾಲಯ ಕಟ್ಟಡದ ಕಾಮಗಾರಿಗೆ ಟೆಂಡರ್ ಕರೆದಿಲ್ಲ ಯಾಕೆ? ಶಾಂತಿನಗರ-ಕವೇಲು ರಸ್ತೆಯ ಬದಿ ತ್ಯಾಜ್ಯ ತೆರವು ಮಾಡಿಲ್ಲ ಯಾಕೆ? ಎಂದು ಗ್ರಾಮಸ್ಥರು ಪ್ರಶ್ನಿಸಿದರು.