ಜಿಲ್ಲೆ

ಶಿಕ್ಷಣ ಮೊಟಕುಗೊಳಿಸಬೇಕಿದ್ದ ಹುಡುಗಿಗೆ 9 ಚಿನ್ನದ ಪದಕ!; ಮೈಸೂರು ವಿವಿ 102ನೇ ಘಟಿಕೋತ್ಸವ

ಮೈಸೂರು: ತಂದೆ-ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿ ಶಿಕ್ಷಣ ಮೊಟಕುಗೊಳಿಸಲು ಮುಂದಾಗಿದ್ದ ವಿದ್ಯಾರ್ಥಿ ವಿ.ತೇಜಸ್ವಿನಿ ಬಿ.ಎ. ಪದವಿಯಲ್ಲಿ 9 ಚಿನ್ನದ ಪದಕ, 10 ನಗದು ಬಹುಮಾನ ಮುಡಿಗೇರಿಸಿಕೊಂಡಿದ್ದಾರೆ.

ಮಂಗಳವಾರ ನಡೆದ ಮೈಸೂರು ವಿವಿ 102ನೇ ಘಟಿಕೋತ್ಸವದಲ್ಲಿ ಅತಿ ಹೆಚ್ಚು ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳು ಅವರ ಹಿನ್ನೆಲೆ, ಅನುಭವ ಹಂಚಿಕೊಂಡರು. ವಿ.ತೇಜಸ್ವಿನಿ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕು ಸತ್ತೇಗಾಲ ಗ್ರಾಮದವರು. ‘4ನೇ ತರಗತಿ ವ್ಯಾಸಂಗ ಮಾಡುವಾಗ ತಾಯಿಯನ್ನು ಕಳೆದುಕೊಂಡಿದ್ದರು. ಪಿಯು ಓದುವಾಗ ತಂದೆಯೂ ನಿಧನರಾದರು. ಈ ಆಘಾತದಿಂದ ಓದು ಸ್ಥಗಿತಗೊಳಿಸಲು ಮುಂದಾಗಿ ಪರೀಕ್ಷೆಯ ಪ್ರವೇಶಪತ್ರವನ್ನೂ ತೆಗೆದುಕೊಂಡಿರಲಿಲ್ಲ. ಆದರೆ, ಪ್ರಾಂಶುಪಾಲರ ಮಾತಿನಿಂದ ಓದು ಮುಂದುವರಿಸಿ, ಈ ಸಾಧನೆ ಮಾಡಲು ಸಾಧ್ಯವಾಗಿದೆ’ ಎಂದು ಹೇಳುವಾಗ ವಿ.ತೇಜಸ್ವಿನಿ ಭಾವುಕರಾದರು. ಈಕೆ ಸದ್ಯ ಎಂಎ (ಕನ್ನಡ ಐಚ್ಛಿಕ) ಓದುತ್ತಿದ್ದಾರೆ.

ಗಾರೆ ಕೆಲಸ ಮಾಡಿಕೊಂಡೇ ಸಾಧನೆ: ಗಾರೆ ಕೆಲಸ ಮಾಡಿಕೊಂಡೇ ಚಾಮರಾಜನಗರ ತಾಲೂಕು ನಾಗವಳ್ಳಿ ಗ್ರಾಮದ ಪಿ.ಮಹದೇವಸ್ವಾಮಿ 14 ಚಿನ್ನದ ಪದಕ ಹಾಗೂ 3 ನಗದು ಬಹುಮಾನ ಪಡೆಯುವ ಮೂಲಕ ಮಾದರಿಯಾಗಿದ್ದಾರೆ. ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿಯಾದ ಇವರು, ಎಂ.ಎ. ಕನ್ನಡದಲ್ಲಿ 2200 ಅಂಕಗಳಿಗೆ 1963 ಅಂಕ ಪಡೆದು ಸಾಧಿಸುವ ಛಲವಿದ್ದರೆ ಯಾವುದೂ ಅಸಾಧ್ಯವಲ್ಲ ಎಂಬುದನ್ನು ನಿರೂಪಿಸಿದ್ದಾರೆ. ಸೂಕ್ತ ಸೌಲಭ್ಯಗಳಿಲ್ಲದೆ, ಬಿಡುವಿನ ವೇಳೆಯಲ್ಲಿ ಗಾರೆ ಕೆಲಸ, ಪೇಂಟಿಂಗ್ ಮಾಡಿಕೊಂಡು ಓದಿ ಸಾಧನೆ ಮಾಡಿರುವುದು ಗಮನಾರ್ಹ.

ಅಫ್ಘಾನಿಸ್ತಾನ ವಿದ್ಯಾರ್ಥಿಗೆ ಬಂಗಾರದ ಗರಿ: ಸಂಘರ್ಷ ಪೀಡಿತ ಅಫ್ಘಾನಿಸ್ತಾನದ ವಿದ್ಯಾರ್ಥಿ ಸಯೀದ್ ಕ್ವಾದ್ರಾತ್ ಹಶಿಮಿ ಎಲ್​ಎಲ್​ಎಂನಲ್ಲಿ (ಅಂತಾರಾಷ್ಟ್ರೀಯ ಕಾನೂನು) 2 ಚಿನ್ನದ ಪದಕ ಮತ್ತು 3 ನಗದು ಬಹುಮಾನದೊಂದಿಗೆ ಗಮನ ಸೆಳೆದಿದ್ದಾರೆ. ಚಿನ್ನದ ಪದಕ ಪಡೆದ ಏಕೈಕ ವಿದೇಶಿ ವಿದ್ಯಾರ್ಥಿ ಎಂಬ ಹಿರಿಮೆಗೂ ಭಾಜನರಾಗಿದ್ದಾರೆ.

ಭಾವನಾಗೆ ಹೆಚ್ಚು ಬಂಗಾರ: ಎಂ.ಎಸ್ಸಿ. ರಸಾಯನಶಾಸ್ತ್ರ ಅಧ್ಯಯನ ವಿಭಾಗದ ಜಿ.ಎಂ.ಭಾವನಾ ಅತಿ ಹೆಚ್ಚು 19 ಚಿನ್ನದ ಪದಕ, 2 ನಗದು ಬಹುಮಾನ ಪಡೆದರು. ಕೆ.ಆರ್.ಪೇಟೆ ತಾಲೂಕಿನ ಗೋವಿಂದನಹಳ್ಳಿ ಗ್ರಾಮದ ಈಕೆ ಐಎಎಸ್ ಅಧಿಕಾರಿಯಾಗುವ ಗುರಿ ಹೊಂದಿದ್ದು, ಅದಕ್ಕಾಗಿ ಓದುತ್ತಿದ್ದೇನೆ ಎನ್ನುತ್ತಾರೆ ಭಾವನಾ.

ಎರಡು ಚಿನ್ನದ ಪದಕ ಘೋಷಣೆ: ರಾಜ್​ಕುಮಾರ್ ಕುಟುಂಬದಿಂದ ಮೈಸೂರು ವಿವಿ ವಿದ್ಯಾರ್ಥಿಗಳಿಗೆ ಎರಡು ಚಿನ್ನದ ಪದಕ ಘೊಷಣೆ ಮಾಡಲಾಯಿತು. ಪುನೀತ್ ಹೆಸರಲ್ಲಿ ಲಲಿತಕಲೆ ವಿಷಯ ಹಾಗೂ ಪಾರ್ವತಮ್ಮ ಹೆಸರಲ್ಲಿ ವ್ಯವಹಾರ ನಿರ್ವಹಣೆ ವಿಷಯದಲ್ಲಿ ಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಲಾಗುತ್ತದೆ.