ಜಿಲ್ಲೆ

ತುಳುನಾಡಿನ ಸಂಸ್ಕೃತಿ, ಆಚಾರ-ವಿಚಾರ ಶ್ರೇಷ್ಠ

ಬೆಳ್ತಂಗಡಿ: ತುಳುನಾಡಿನಲ್ಲಿ ಬ್ರಹ್ಮಕಲಶೋತ್ಸವ, ನಾಗಾರಾಧನೆ, ಯಕ್ಷಗಾನ, ಕಂಬಳ, ಕೋಲ ಅತ್ಯಂತ ಶ್ರದ್ಧಾ ಭಕ್ತಿಯಿಂದ ನಡೆಯುತ್ತದೆ. ನಮ್ಮ ಸಂಸ್ಕೃತಿ ಆಚಾರ-ವಿಚಾರ ವಿಶೇಷವಾದುದು. ಅಳದಂಗಡಿ ದೇವರ ಬ್ರಹ್ಮಕಲಶೋತ್ಸವ ಎಲ್ಲರ ಸಹಕಾರ ಹಾಗೂ ಕೂಡುವಿಕೆಯಿಂದ ಉತ್ತಮ ರೀತಿಯಲ್ಲಿ ನಡೆಯಲಿ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಹರೀಶ್‌ಕುಮಾರ್ ಹೇಳಿದರು.

ಗುರುವಾರ ಅಳದಂಗಡಿ ಶ್ರೀ ಸೋಮನಾಥೇಶ್ವರಿ ದೇವರ ಬ್ರಹ್ಮಕಲಶೋತ್ಸವ ಚಪ್ಪರ ಮುಹೂರ್ತ ಕಾರ್ಯಕ್ರಮದಲ್ಲಿ ಮಾತನಾಡಿ, ಅಳದಂಗಡಿ ಅರಸರ ನೇತೃತ್ವದಲ್ಲಿ ನಡೆಯುವ ಬ್ರಹ್ಮಕಲಶೋತ್ಸವಕ್ಕೆ ನಮ್ಮೆಲ್ಲರ ಸಹಕಾರವಿದೆ ಎಂದರು.

ಉಜಿರೆಯ ಉದ್ಯಮಿ, ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್‌ಕುಮಾರ್ ಮಾತನಾಡಿ, ಅಳದಂಗಡಿ ಅರಸರ ಹಾಗೂ ದೇವಸ್ಥಾನದ ಕಾರ್ಯಕ್ರಮದಲ್ಲಿ ಭಾಗವಹಿಸುವುದು ನನ್ನ ಸುಯೋಗವೆಂದು ನಂಬಿದ್ದೇನೆ. ಧಾರ್ಮಿಕ ಕಾರ್ಯಕ್ರಮಕ್ಕೆ ಚಪ್ಪರ ಮೂಹೂರ್ತ ವಿಶೇಷ. ಅಳದಂಗಡಿ ಬ್ರಹ್ಮಕಲಶೋತ್ಸವದಲ್ಲಿ ಧಾರ್ಮಿಕತೆಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಒಗ್ಗಟ್ಟಿನಲ್ಲಿ ದೇವರ ಸೇವೆ ಮಾಡೋಣ ಎಂದರು.

ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ್ ಅಜಿಲ ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ದೇವೇಂದ್ರ ಹೆಗ್ಡೆ ಕೊಕ್ರಾಡಿ ಸ್ವಾಗತಿಸಿದರು. ಪ್ರಧಾನ ಸಂಚಾಲಕ ಶಿವಪ್ರಸಾದ್ ಅಜಿಲ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರ.ಕಾರ್ಯದರ್ಶಿ ಪಿ.ಎಚ್.ನಿತ್ಯಾನಂದ ಶೆಟ್ಟಿ ನಿರೂಪಿಸಿದರು. ಸಮಿತಿ ಪ್ರಮುಖರಾದ ಮೋಹನದಾಸ್ ವಂದಿಸಿದರು.

ದೇವಸ್ಥಾನದ ಪ್ರಧಾನ ಆರ್ಚಕ ಪ್ರಕಾಶ್ ಭಟ್ ವೈದಿಕ ವಿಧಿ-ವಿಧಾನ ನೆರವೇರಿಸಿದರು. ಮೊದಲ ಕಲಶ ಕೂಪನ್ ಅನ್ನು ಖ್ಯಾತ ನಾಟಿ ವೈದ್ಯ ಬೇಬಿ ಪೂಜಾರಿ ಪುಣ್ಕೆತ್ಯಾರು ಅವರಿಗೆ ನೀಡಲಾಯಿತು.