ಹಾವೇರಿ: ಮನೆ ಪಾಠಕ್ಕೆಂದು ಬರುತ್ತಿದ್ದ ಹತ್ತನೇ ತರಗತಿಯ ವಿದ್ಯಾರ್ಥಿನಿಯನ್ನು ಶಿಕ್ಷಕನೊಬ್ಬ ತನ್ನ ಲೈಂಗಿಕ ತೃಷಿ ತೀರಿಸಿಕೊಳ್ಳಲು ಬಳಸಿಕೊಂಡಿದ್ದು, ಅವಳೀಗ ಗರ್ಭಿಣಿಯಾಗಿದ್ದಾಳೆ. ಸದ್ಯದಲ್ಲೇ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನೂ ಬರೆಯಲು ಅವಳಿಗೆ ಸಾಧ್ಯವಿಲ್ಲದಂತಾಗಿದೆ.
ಈ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನಲ್ಲಿ ನಡೆದಿದೆ. ಕೃತ್ಯ ಎಸಗಿರುವ ಶಿಕ್ಷಕನನ್ನು ಪ್ರವೀಣ್ ಮರಿಯಣ್ಣನವರ್ ಎಂದು ಗುರುತಿಸಲಾಗಿದೆ. ಶಿಗ್ಗಾವಿ ತಾಲೂಕು ಅಂದಲಗಿಯವನಾದ ಈತ ನಗರದ ವಿಶ್ವೇಶ್ವರಯ್ಯ ಪ್ರೌಢಶಾಲೆಯಲ್ಲಿ ಗಣಿತ ಶಿಕ್ಷಕನಾಗಿದ್ದಾನೆ. ಇದನ್ನೂ ಓದಿ ಲವ್ ಮಾಕ್ಟೇಲ್ 2 ಚಿತ್ರದ ಸ್ಕ್ರಿಪ್ಟ್ ಪೂಜೆ ಆಯ್ತು!
ಕಳೆದ ಜನವರಿ ತಿಂಗಳಲ್ಲಿ ಗಣಿತ ಪಾಠ ಹೇಳಿಕೊಡುವ ನೆಪದಲ್ಲಿ ವಿದ್ಯಾರ್ಥಿನಿಯ ಮನೆಗೆ ಬಂದಿದ್ದ ಈತ ಅಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ಅತ್ಯಾಚಾರ ಎಸಗಿದ್ದಾನೆ. ಪರಿಣಾಮವಾಗಿ ಆಕೆ ಗರ್ಭಿಣಿಯಾಗಿದ್ದಾಳೆ. ಆತನ ಬೆದರಿಕೆಯಿಂದಾಗಿ ಈ ವಿಷಯವನ್ನು ವಿದ್ಯಾರ್ಥಿನಿ ಮುಚ್ಚಿಟ್ಟಿದ್ದಳೆನ್ನಲಾಗಿದೆ.
ಆಕೆ ಚಿಕಿತ್ಸೆಗಾಗಿ ಜೂನ್ 17ರಂದು ಆಸ್ಪತ್ರೆಗೆ ಹೋದಾಗ ಆಕೆ ಗರ್ಭಿಣಿ ಇರುವುದು ವೈದ್ಯರಿಗೆ ಗೊತ್ತಾಗಿದೆ. ನಂತರ ಪಾಲಕರಿಗೆ ವಿಷಯ ತಿಳಿದಿದ್ದು, ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಶಿಕ್ಷಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.