ಜಿಲ್ಲೆ

ಅಂತರಂಗ ಶೋಧಿಸುತ್ತವೆ ಕತೆಗಳು : ಅನುಪಮಾ ಪ್ರಸಾದ್ ಅಭಿಪ್ರಾಯ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ನಿರ್ದಿಷ್ಟ ದೇಶ, ಪ್ರದೇಶಗಳಿಗೆ ಅನುಗುಣವಾದ ಸಂವೇದನೆಗಳನ್ನು ವಿಭಿನ್ನವಾಗಿ ದಾಟಿಸುವ ಶಕ್ತಿ ಕಥನ ಕಟ್ಟುವ ಸೃಜನಶೀಲತೆಗಿದೆ. ಕತೆ ಕಟ್ಟುವ ಕಾಲಕ್ಕೆ ಪಾತ್ರಗಳ ಆಯ್ಕೆ, ನಿರೂಪಣೆ ಮತ್ತು ವಸ್ತುವನ್ನು ಯಾವ ನೆಲೆಯ ಗಮ್ಯಕ್ಕೆ ತಲುಪಿಸಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಕಂಡುಕೊಳ್ಳುವ ಸ್ಪಷ್ಟತೆ ಮುಖ್ಯ ಎಂದು ಕಥೆಗಾರ್ತಿ ಅನುಪಮಾ ಪ್ರಸಾದ್ ಹೇಳಿದರು.

ಎಸ್‌ಡಿಎಂ ಕಾಲೇಜಿನ ಸಮ್ಯಕ್‌ದರ್ಶನ ಸಭಾಂಗಣದಲ್ಲಿ ನಡೆದ ‘ಸ್ವೀಕ್ಸ್-3’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎಸ್‌ಡಿಎಂ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎ.ಕುಮಾರ ಹೆಗ್ಡೆ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯೊಳಗೂ ಕತೆಗಳು ಇರುತ್ತವೆ. ಪತ್ರಿಕೋದ್ಯಮ ವಿಭಾಗದ ವತಿಯಿಂದ ಆಯೋಜಿಸಿರುವ ಇಂತಹ ಕಾರ್ಯಕ್ರಮಗಳು ಹೊಸ ಕತೆಗಾರರಿಗೆ ವೇದಿಕೆಯಾಗಿದ್ದು, ಇದು ನಮ್ಮೊಳಗಿನ ಪ್ರತಿಭೆ ಗುರುತಿಸಲು ಸಹಾಯ ಮಾಡುತ್ತದೆ ಎಂದರು.

ಸ್ವೀಕ್ಸ್‌ನ ಮೂರನೇ ಸಂಚಿಕೆಯಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕ ವಿರಾಟ್ ಪದ್ಮನಾಭ, ವಿದ್ಯಾರ್ಥಿಗಳಾದ ಸಂಜಯ್ ಚಿತ್ರದುರ್ಗ, ಸೃಷ್ಟಿ ಚಂಡಕಿ, ದರ್ಶಿನಿ ತಿಪ್ಪಾರೆಡ್ಡಿ, ಸಿಂಚನ ಕಲ್ಲೂರಾಯ ಅವರು ಕತೆಗಳನ್ನು ಹೇಳಿದರು. ಎಸ್‌ಡಿಎಂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಡೀನ್ ಪ್ರೊ.ವಿಶ್ವನಾಥ ಪಿ.ಹಾಗೂ ವಿವಿಧ ವಿಭಾಗಗಳ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಡಾ.ಭಾಸ್ಕರ್ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ವಿದ್ಯಾರ್ಥಿನಿ ದಿವ್ಯಶ್ರೀ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.