ಜಿಲ್ಲೆ

ತೂಗುಯ್ಯಲೆಯಲ್ಲಿ ತೂಗು ಸೇತುವೆ : ದುಂಬೆಟ್ಟು ಮೃತ್ಯುಂಜಯ ನದಿಯ ಹ್ಯಾಂಗಿಂಗ್ ಬ್ರಿಜ್ : ಮನವಿಗಳಿಗೆ ಗಮನವೇ ಇಲ್ಲ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಮುಂಡಾಜೆ ಗ್ರಾಪಂ ವ್ಯಾಪ್ತಿಯ ದುಂಬೆಟ್ಟು ಎಂಬಲ್ಲಿ ಮೃತ್ಯುಂಜಯ ನದಿಗೆ 25 ವರ್ಷಗಳ ಹಿಂದೆ ನಿರ್ಮಾಣವಾಗಿರುವ ತೂಗು ಸೇತುವೆ ಭವಿಷ್ಯ ತೂಗುಯ್ಯಾಲೆಯಲ್ಲಿದೆ. ಶಿಥಿಲಾವಸ್ಥೆಯಲ್ಲಿರುವ ಈ ತೂಗು ಸೇತುವೆಯಲ್ಲಿ ವಾಹನ ಸಂಚಾರಕ್ಕೆ ಪಂಚಾಯಿತಿ ನಿಷೇಧ ಹೇರಿದೆ.

ಕಡಿರುದ್ಯಾವರ, ಮುಂಡಾಜೆ, ಚಾರ್ಮಾಡಿ, ಕಕ್ಕಿಂಜೆ ಮೊದಲಾದ ಕಡೆ ಹೋಗುವವರಿಗೆ 5 ಕಿ.ಮೀ.ರಷ್ಟು ದೂರ ಕಡಿಮೆಯಾಗುತ್ತದೆ. ನಿತ್ಯ ಸಂಚಾರಿಗಳಿಗೆ, ಹೈನುಗಾರರಿಗೆ ಇದು ಸಂಪರ್ಕದ ಕೊಂಡಿಯಾಗಿದೆ.

ಪ್ರವಾಹದ ಹೊಡೆತ: 130 ಅಡಿ ಉದ್ದ 6 ಅಡಿ ಅಗಲದ ಈ ತೂಗು ಸೇತುವೆ 2019ರ ಆಗಸ್ಟ್‌ನಲ್ಲಿ ನದಿಯಲ್ಲಿ ಹರಿದ ಭಾರಿ ಪ್ರವಾಹದಿಂದ ಶಿಥಿಲಾವಸ್ಥೆ ತಲುಪಿದೆ. ಪ್ರವಾಹದಲ್ಲಿ ತೇಲಿಕೊಂಡು ಬಂದ ಮರಮಟ್ಟು ಸೇತುವೆಗೆ ಬಡಿದು ಅಪಾರ ಹಾನಿಯಾಗಿದೆ. ಈ ಪ್ರದೇಶದಲ್ಲಿ ಸಂಗ್ರಹವಾಗಿರುವ ಮರಳು ಕೂಡ ತೂಗು ಸೇತುವೆಗೆ ಮಾರಕವಾಗಿದೆ. ತೂಗು ಸೇತುವೆ ಪಿಲ್ಲರ್‌ಗಳು ಹಾನಿಗೊಳಗಾಗಿವೆ. ತೂಗು ಸೇತುವೆಯ ತಳ ಭಾಗದ ಕಬ್ಬಿಣದ ಸರಳುಗಳು ಸಂಪೂರ್ಣ ತುಕ್ಕು ಹಿಡಿದಿವೆ. ಸೇತುವೆಗೆ ಆಧಾರವಾಗಿರುವ ರೋಪ್ ಸಾಮರ್ಥ್ಯ ಕಳೆದುಕೊಂಡಿದೆ. ಹಲಗೆಗಳು ಬಿರುಕು ಬಿಟ್ಟಿವೆ. ಕಬ್ಬಿಣ ಕಿತ್ತು ಹೋಗಿದೆ.

5 ಟನ್ ಭಾರ ಹೊರುವ ಸಾಮರ್ಥ್ಯವುಳ್ಳ ಈ ಸೇತುವೆಯ ತಳಭಾಗದ ಕಬ್ಬಿಣ ಕೂಡ ಅಲ್ಲಲ್ಲಿ ಕಿತ್ತು ಹೋಗಿವೆ. ಕಬ್ಬಿಣದ ಭಾಗಗಳು ಗ್ರೀಸಿಂಗ್ ಇಲ್ಲದೆ ತುಕ್ಕು ಹಿಡಿದು ನೇತಾಡುತ್ತಿವೆ. ಸೇತುವೆಯ ತಡೆ ಬೇಲಿ ಕಿತ್ತು ಹೋಗಿದೆ. ಮಳೆಗಾಲದಲ್ಲಿ ನದಿ ನೀರಿನಲ್ಲಿ ತೇಲಿ ಬರುವ ಮರಗಳು ಬಡಿಯುವ ಕಾರಣ ಸೇತುವೆ ಬ್ಯಾಲೆನ್ಸಿಂಗ್ ಕಳೆದುಕೊಂಡಿದೆ. ಸೇತುವೆಯ ರೋಪನ್ನು ಬ್ಯಾಲನ್ಸ್ ಮಾಡಲು ನಿರ್ಮಿಸಿದ್ದ ಚೇಂಬರ್ ಮಣ್ಣು ತುಂಬಿ ಮಾಯವಾಗಿದೆ.

ಪ್ರವಾಹಕ್ಕೆ ಮೊದಲು ದ್ವಿಚಕ್ರ ವಾಹನಗಳು ಸಂಚರಿಸುತ್ತಿದ್ದವು. ಪ್ರವಾಹದ ಬಳಿಕ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹಾಗೂ ಸ್ಥಳೀಯಾಡಳಿತದ ಸಹಾಯದಿಂದ 1.30 ಲಕ್ಷ ರೂ. ವೆಚ್ಚದಲ್ಲಿ ದುರಸ್ತಿ ನಡೆದಿದೆ. ಕಳೆದ ಐದು ವರ್ಷಗಳಿಂದ ನಿರ್ವಹಣೆ ಇಲ್ಲದೆ ಪೂರ್ಣ ಶಿಥಿಲಾವಸ್ಥೆಗೆ ತಲುಪಿದೆ.

ಅನುದಾನ ಸಹಕಾರ

1999-2000ರಲ್ಲಿ ಅಂದಿನ ಚಿಕ್ಕಮಗಳೂರು ಸಂಸದ ಶ್ರೀಕಂಠಪ್ಪ 3 ಲಕ್ಷ ರೂ., ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ 1.50 ಲಕ್ಷ ರೂ., ಬೆಳ್ತಂಗಡಿ ರೋಟರಿ ಸಂಸ್ಥೆ, ಸ್ಥಳೀಯ ಹಾಗೂ ಊರವರ ಸಹಕಾರದಲ್ಲಿ 12 ಲಕ್ಷ ರೂ. ವೆಚ್ಚದಲ್ಲಿ ಸುಳ್ಯದ ತೂಗು ಸೇತುವೆಗಳ ಸರದಾರ ಗಿರೀಶ್ ಭಾರದ್ವಾಜ್ ಅವರು ಈ ತೂಗು ಸೇತುವೆ ನಿರ್ಮಿಸಿದ್ದರು.

2019ರ ಪ್ರವಾಹದಿಂದ ಹಾನಿಗೊಳಗಾದ ತೂಗು ಸೇತುವೆ ದುರಸ್ತಿ ಕಾರ್ಯ ಒಮ್ಮೆ ನಡೆದಿದೆ. ಹಲವು ಎಡರು ತೊಡರುಗಳನ್ನು ದಾಟಿ ನಿರ್ಮಾಣವಾದ ತೂಗು ಸೇತುವೆ ಭವಿಷ್ಯ ಅಪಾಯದಲ್ಲಿದೆ. ಇದರ ರೋಪನ್ನು ಶೀಘ್ರ ಬದಲಾಯಿಸಬೇಕಾದ ಅಗತ್ಯವಿದೆ. ಶಶಿಧರ ಖಾಡಿಲ್ಕಾರ್, ಸ್ಥಳೀಯರು, ದುಂಬೆಟ್ಟು ತೂಗು ಸೇತುವೆಯ ನಿರ್ವಹಣೆ ಕಾರ್ಯ ದೊಡ್ಡ ಮೊತ್ತದ ಕಾಮಗಾರಿಯಾಗಿದ್ದು, ಪಂಚಾಯಿತಿ ವತಿಯಿಂದ ಸಂಬಂಧಪಟ್ಟ ಇಲಾಖೆಗಳಿಗೆ ದುರಸ್ತಿ ನಡೆಸುವಂತೆ ಅನೇಕ ಬಾರಿ ಮನವಿ ಸಲ್ಲಿಸಲಾಗಿದೆ. ಗಣೇಶ ಬಂಗೇರ, ಮುಂಡಾಜೆ ಗ್ರಾಪಂ ಅಧ್ಯಕ್ಷ