

ವಿಜಯವಾಣಿ ಸುದ್ದಿಜಾಲ ಕಡಬ
ಜಿಲ್ಲೆಯ ಕಾಡಂಚಿನ ಗ್ರಾಮಗಳಲ್ಲಿ ಅರಣ್ಯ, ಕಂದಾಯ ಇಲಾಖೆಯ ಜಂಟಿ ಸರ್ವೇ ವಿಚಾರ ಕುರಿತು ಜಿಲ್ಲಾಧಿಕಾರಿ ಮತ್ತು ಅರಣ್ಯ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿ ಅಂತಿಮ ನಿರ್ಧಾರಕ್ಕೆ ಬರಲಾಗುವುದು ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.
ಕಡಬ ಆಡಳಿತ ಸೌಧದಲ್ಲಿ ಮಂಗಳವಾರ ನಡೆದ ಅರಣ್ಯ, ಕಂದಾಯ, ಸಾರ್ವಜನಿಕರ ಸಭೆಯಲ್ಲಿ ಮಾತನಾಡಿದರು.
ಜಂಟಿ ಸರ್ವೇ ಕುರಿತು ಕಂದಾಯ, ಸರ್ವೇ ಇಲಾಖೆ ನಡುವೆ ಸಮನ್ವಯದ ಕೊರತೆಯಿಂದ ಸಮಸ್ಯೆಯಾಗಿದೆ. ಈ ಸಭೆಯಲ್ಲಿ ಭಾಗವಹಿಸಿದ ಎರಡು ಇಲಾಖೆಗಳ ಅಧಿಕಾರಿಗಳಲ್ಲಿ ಸ್ಪಷ್ಟವಾದ ವಿವರವಿಲ್ಲ. ಹಾಗಾಗಿ ಈ ಸಭೆಯಲ್ಲಿ ಎಲ್ಲ ಸಮಸ್ಯೆಗಳು ಬಗೆಹರಿಯುತ್ತವೆ ಎನ್ನುವ ವಿಶ್ವಾಸವಿಲ್ಲ. ಸುಳ್ಯ, ಬೆಳ್ತಂಗಡಿ ತಾಲೂಕಿನ ಶಾಸಕರು, ಮಲೆನಾಡು ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು, ಜಿಲ್ಲಾಧಿಕಾರಿ, ಅರಣ್ಯ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳ ಜತೆ ಶೀಘ್ರದಲ್ಲಿ ಸಭೆ ಕರೆದು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಪಹಣಿಯಲ್ಲಿ ಭಾಗಶಃ ಅರಣ್ಯ ಎಂದು ಉಲ್ಲೇಖವಾಗಿರುವುದರಿಂದ ಪ್ಲಾಟಿಂಗ್ ಮಾಡಲು ಅರಣ್ಯ ಇಲಾಖೆಯ ನಿರಾಕ್ಷೇಪಣಾ ಪತ್ರ ಅಗತ್ಯ ಎಂದು ಸರ್ವೇ ಇಲಾಖೆ ಹೇಳುತ್ತಿದೆ. ಆದರೆ ಪ್ಲಾಟಿಂಗ್ ಮಾಡಲು ಅರಣ್ಯ ಇಲಾಖೆ ನಿರಾಕ್ಷೇಪಣಾ ಪತ್ರ ನೀಡುತ್ತಿಲ್ಲ. ಪ್ಲಾಟಿಂಗ್ ಆಗದೆ ಸಹಕಾರಿ ಬ್ಯಾಂಕ್ಗಳಲ್ಲಿ ಸಾಲ ಸೌಲಭ್ಯ ಸಿಗುತ್ತಿಲ್ಲ ಎಂದು ಮುಖಂಡರಾದ ಸಯ್ಯದ್ ಮೀರಾ ಸಾಹೇಬ್, ಸುಧೀರ್ ಕುಮಾರ್ ಶೆಟ್ಟಿ, ಫಝಲ್ ಕೋಡಿಂಬಾಳ, ಪಿ.ಪಿ.ವರ್ಗೀಸ್, ಭಾಸ್ಕರ ಗೌಡ ಇಚ್ಲಂಪಾಡಿ, ಮಧೂಸೂಧನ್ ಕೊಂಬಾರು, ದಾಮೋದರ ಗುಂಡ್ಯ ಆಕ್ರೋಶ ವ್ಯಕ್ತಪಡಿಸಿದರು.
ಭಾಗಶಃ ಅರಣ್ಯವೆಂದು ನಮೂದಾಗಿರುವ ಪಹಣಿಯ ಪ್ಲಾಟಿಂಗ್ ನಡೆಸಲು ನಿರಾಪೇಕ್ಷಣಾ ಪತ್ರಕ್ಕಾಗಿ ಕಡಬ ತಾಲೂಕು ಕಚೇರಿಯಿಂದ 70 ಅರ್ಜಿ ಅರಣ್ಯ ಇಲಾಖೆಗೆ ಕಳುಹಿಸಲಾಗಿದೆ. ಯಾವುದು ವಿಲೇವಾರಿಯಾಗಿಲ್ಲ ಎಂದು ಕಡಬ ತಾಲೂಕು ತಹಸೀಲ್ದಾರ್ ಪ್ರಭಾಕಾರ ಖಜೂರೆ ತಿಳಿಸಿದರು. ತಕ್ಷಣ ಕ್ರಮ ಕೈಗೊಳ್ಳಿ ಎಂದು ಅರಣ್ಯ ಇಲಾಖೆಗೆ ಸಂಸದರು ಆದೇಶಿಸಿದರು.
ಕಡಬ ಪಪಂ ವ್ಯಾಪ್ತಿಯ ಕಂದಾಯ ಭೂಮಿಯನ್ನು ಪ್ಲಾಟಿಂಗ್ ನಡೆಸಬಾರದೆಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿರುವುದಾಗಿ ಬಿಜೆಪಿ ಮುಖಂಡೆ ಸುಭಾಧ ಎಸ್.ರೈ ಸಂಸದರಲ್ಲಿ ತಿಳಿಸಿದರು. ಈ ಬಗ್ಗೆ ಜಿಲ್ಲಾಧಿಕಾರಿಗಳ ಜತೆ ಚರ್ಚಿಸುವುದಾಗಿ ತಿಳಿಸಿದರು.
ಮಲೆನಾಡು ಹಿತರಕ್ಷಣಾ ಸಮಿತಿ ಸಂಚಾಲಕ ಕಿಶೋರ್ ಶಿರಾಡಿ ಮಾತನಾಡಿದರು. ಶಾಸಕಿ ಭಾಗೀರಥಿ ಮುರುಳ್ಯ, ವಿವಿಧ ಗ್ರಾಪಂ ಅಧ್ಯಕ್ಷರು, ರಾಜಕೀಯ, ಧಾರ್ಮಿಕ ಮುಖಂಡರು ಉಪಸ್ಥಿತರಿದ್ದರು. ಕಡಬ ಸರ್ವೇ ಇಲಾಖಾಧಿಕಾರಿ ಶ್ರೀನಿವಾಸ್, ಕಡಬ ಪಪಂ ಮುಖ್ಯಾಧಿಕಾರಿ ಲೀಲಾವತಿ, ಸಹಾಯಕ ಅರಣ್ಯ ಸಂರಕ್ಷಾಧಿಕಾರಿ(ಪರೀಕ್ಷಾರ್ಥಿ) ಹಸ್ತಾ ಶೆಟ್ಟಿ, ಪಂಜ ವಲಯ ಅರಣ್ಯಾಧಿಕಾರಿ ಸಂಧ್ಯಾ, ಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ್, ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ, ಸುಬ್ರಹ್ಮಣ್ಯ ಉಪವಲಯ ಅರಣ್ಯಾಧಿಕಾರಿ ಅಪೂರ್ವ ಮಾಹಿತಿ ನೀಡಿದರು.
ವಿಶೇಷ ಗ್ರಾಮಸಭೆ ನಡೆಸಿ
15 ವರ್ಷಗಳಿಂದ ಜಂಟಿ ಸರ್ವೇಗಾಗಿ ಹೋರಾಟ ಮಾಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಜಂಟಿ ಸರ್ವೇ ನಡೆಸಲಾಗಿತ್ತಿದ್ದರೂ ಅವೆಲ್ಲವೂ ಅವೈಜ್ಞಾನಿಕ. ಸರ್ವೇಗೂ ಮುನ್ನ ಗ್ರಾಮ ಪಂಚಾಯಿತಿಗಳಲ್ಲಿ ವಿಶೇಷ ಗ್ರಾಮ ಸಭೆ ನಡೆಸಿ ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಿಸಿಬೇಕು. ಜಂಟಿ ಸರ್ವೇ ನಡೆಸಿದ ಬಳಿಕ ಅರಣ್ಯ ಇಲಾಖೆ ಅಂಚಿನಲ್ಲಿರುವ ರೈತರ ಹಕ್ಕು ಪತ್ರ ರದ್ದು ಮಾಡಬಾರದು ಎಂದು ಮಲೆನಾಡು ಹಿತರಕ್ಷಣಾ ಸಮಿತಿ ಸಂಚಾಲಕ ಕಿಶೋರ್ ಶಿರಾಡಿ ಆಗ್ರಹಿಸಿದರು.