ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ ಸೂರಾಲು ಮಹತೋಭಾರ ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸೂರಾಲು ಅರಮನೆಯವರ ಮತ್ತು ಮಾಗಣೆಯ ಸಮಸ್ತ ಭಕ್ತರ ಸಮ್ಮುಖದಲ್ಲಿ ಪ್ರಥಮ ಬಾರಿ ಲಕ್ಷದೀಪೋತ್ಸವ ನಡೆಯಲಿದ್ದು, ನ.30ರಿಂದ ಆರಂಭಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಕ್ಷೇತ್ರದಲ್ಲಿ ಸೋಮವಾರ ನಡೆಯಿತು. ಅಭಿಜಿತ್ ಸೂರಾಲು ಅರಮನೆ, ದೇವಸ್ಥಾನದ ತಂತ್ರಿ ಸೂರಾಲು ದೇವಿಪ್ರಸಾದ್ ಭಟ್ ದೇವಸ್ಥಾನದ ಪ್ರದಾನ ಅರ್ಚಕ ಸೀತಾರಾಮ ಅಡಿಗ ಕೋರ್ಚಿಬೆಟ್ಟು, ಮಾಗಣೆಯ ಸಮಸ್ತ ಭಕ್ತರು ಉಪಸ್ಥಿತರಿದ್ದರು. ಕಾರ್ಯಕ್ರಮದ ವಿವರ: ನ.30ರ ಬೆಳಗ್ಗೆ 08.30ರಿಂದ ಶತರುದ್ರಾಭಿಷೇಕ ಸೇವೆ ಆರಂಭ, ಮಧ್ಯಾಹ್ನ 12.30ರಿಂದ ಕಲಶಾಭಿಷೇಕ, ಮಹಾಪೂಜೆ, ಸಂಜೆ 5ರಿಂದ ದೀವಟಿಗೆ ಬೆಳಕಿನ ಮಹಾಪೂಜೆ ನಡೆಯಲಿದೆ. 5.58ಕ್ಕೆ ಸೂರ್ಯಾಸ್ತಮಾನ ಸುಮೂಹೂರ್ತದಲ್ಲಿ ಲಕ್ಷ ದೀಪೋತ್ಸವದ ದೀಪ ಪ್ರಜ್ವಲನ ನಡೆಯಲಿದ್ದು, ಆನುವಂಶಿಕ ಆಡಳಿತ ಮೊಕ್ತೇಸರ ಪಿ.ಸುದರ್ಶನ ಶೆಟ್ಟಿ ಸೂರಾಲು ಅರಮನೆ ಉದ್ಘಾಟಿಸಲಿದ್ದಾರೆ. ಸಂಜೆ6ರಿಂದ ಮಹಾರಂಗಪೂಜೆ, ಮಹಾರಂಗಪೂಜೆ ಬಲಿ, ರಾತ್ರಿ 08.30ಕ್ಕೆ ಲಕ್ಷ ದೀಪೋತ್ಸವ ಮತ್ತು ರಥೋತ್ಸವ, ಮಹಾಅನ್ನಸಂತರ್ಪಣೆ ನಡೆಯಲಿದ್ದು, ನಂತರ ಶಿವಗಾನಾಮೃತ ಭಕ್ತಿಗಾನಸುಧೆ ಮುಂತಾದ ಕಾರ್ಯಕ್ರಮ ನಡೆಯಲಿವೆ. ಲಕ್ಷದೀಪೋತ್ಸವ ಪ್ರಯುಕ್ತ ಭಕ್ತರಿಗೆ ಹಣತೆ ಸೇವೆ ಹಾಗೂ ಹೊರೆಕಾಣಿಕೆ ನೀಡಲು ಅವಕಾಶವಿರುವುದಾಗಿ ಆನುವಂಶಿಕ ಆಡಳಿತ ಮೊಕ್ತೇಸರ ಪಿ.ಸುದರ್ಶನ ಶೆಟ್ಟಿ ಸೂರಾಲು ಅರಮನೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೀಪದ ಬೆಳಕಿನಲ್ಲಿ ಶಿವನನ್ನು ಕಾಣಬೇಕು. ಚಾರಿತ್ರಿಕವಾಗಿ ಐತಿಹಾಸಿಕ ಊರು ಸೂರಾಲು. ಮಣ್ಣಿನ ಅರಮನೆ ಮತ್ತು ದೇವಸ್ಥಾನದ ಶಿಲಾಮಯ ಗರ್ಭಗುಡಿ ಮತ್ತು ತೀರ್ಥ ಮಂಟಪ ವಿಶಿಷ್ಠವಾದದ್ದು. ಕಾರ್ತಿಕ ಮಾಸದ ಅಮಾವಾಸ್ಯೆಯ ಅಡಕೆ ಪೂಜೆ ವಿಸ್ತರಿಸಿ ಲಕ್ಷ ದೀಪೋತ್ಸವವನ್ನು ಜಗದ್ವಿಖ್ಯಾತಗೊಳಿಸಲು ತೀರ್ಮಾನಿಸಲಾಗಿದೆ. -ದೇವಿಪ್ರಸಾದ್ ಭಟ್, ಸೂರಾಲು ತಂತ್ರಿ
ಪ್ರಥಮ ಬಾರಿಗೆ ಶ್ರೀಕ್ಷೇತ್ರದಲ್ಲಿ ಲಕ್ಷ ದೀಪೋತ್ಸವ ನಡೆಸಲು ತೀರ್ಮಾನಿಸಲಾಗಿದೆ. ಭಕ್ತರಿಗೆ ದೀಪ ಪ್ರಜ್ವಲನೆಗೆ ಅವಕಾಶವಿದ್ದು, ಸಂಜೆ 6ರ ಒಳಗೆ ಆಗಮಿಸಬೇಕು. ಸುಮಾರು 15,000 ಜನರ ಆಗಮಿಸುವ ನಿರೀಕ್ಷೆ ಇದೆ. -ಅಭಿಜಿತ್ ಸೂರಾಲು ಅರಮನೆ.