ಜಿಲ್ಲೆ

ಎಲ್ಲರ ಮಂಪರು ಪರೀಕ್ಷೆ ನಡೆಯಲಿ: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣ ಕುರಿತು ನಿವೃತ್ತ ಪೊಲೀಸ್ ಕಮಿಷನರ್ ಪ್ರತಿಕ್ರಿಯೆ

ಬೆಂಗಳೂರು: 545 ಪೊಲೀಸ್ ಸಬ್​ ಇನ್​ಸ್ಪೆಕ್ಟರ್​ ನೇಮಕಾತಿ ಅಕ್ರಮ ಪ್ರಕರಣ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದಲ್ಲದೆ, ಆ ಸಂಬಂಧ ದಿನೇದಿನೆ ನಾನಾ ಬೆಳವಣಿಗೆಗಳು ನಡೆಯುತ್ತಿದ್ದು, ಇದೀಗ ನಿವೃತ್ತ ಪೊಲೀಸ್ ಆಯುಕ್ತರೊಬ್ಬರು ಪ್ರತಿಕ್ರಿಯೆ ನೀಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹೌದು.. ಪಿಎಸ್​ಐ ನೇಮಕಾತಿಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ನಿವೃತ್ತ ಪೊಲೀಸ್​ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಪ್ರತಿಕ್ರಿಯೆ ನೀಡಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಈ ರೀತಿ ಆಗುತ್ತಿರುವುದು ಅವಮಾನ. ನಾನು ಅಜಯ್ ಕುಮಾರ್ ಸಿಂಗ್ ಇದ್ದಾಗ ಈ ಒಎಂಆರ್ ಶೀಟ್ ವ್ಯವಸ್ಥೆ ಜಾರಿಗೆ ತಂದಿದ್ದೆವು. ಆದರೆ ಈಗ ಅದನ್ನೂ ಮೀರಿ ಈ ರೀತಿ ಅಕ್ರಮ ನಡೆಯುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಎಲ್ಲರ ಮಂಪರು ಪರೀಕ್ಷೆ ಮಾಡಿಸಬೇಕು ಹಾಗೂ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಬೇಕು. ಇಲ್ಲವಾದರೆ ಪೊಲೀಸ್ ಇಲಾಖೆ ಮೇಲೆ ನಂಬಿಕೆ ಹೊರಟು ಹೋಗುತ್ತದೆ ಎಂದು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮತ್ತೊಂದೆಡೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ 11 ಮಂದಿಗೆ 19ನೇ ಜೆಎಂಎಫ್​ಸಿ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಅಲ್ಲದೆ ಮನು ಕುಮಾರ್ ಎಂಬ ಅಭ್ಯರ್ಥಿ ನಾಲ್ಕು ದಿನಗಳ ಕಾಲ ಸಿಐಡಿ ಕಸ್ಟಡಿಗೆ, ನಿನ್ನೆ ಬಂಧನವಾಗಿದ್ದ ಶಶಿಧರ್ ಹಾಗೂ ಕೇಶವಮೂರ್ತಿ‌ಗೆ 10 ದಿನಗಳ ಕಾಲ ಸಿಐಡಿ ಕಸ್ಟಡಿಗೆ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.