ಜಿಲ್ಲೆ

ಕಾಲೇಜೇ ಸರಿ ಇಲ್ಲ ಅಂತ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ!

Webdesk - Ravikanth

ಮಂಗಳೂರು: ಯುವಕ-ಯುವತಿಯರು ಪ್ರೇಮವೈಫಲ್ಯ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವುದೇನೂ ಹೊಸದಲ್ಲ. ಆದರೆ ಇಲ್ಲೊಬ್ಬ ವಿದ್ಯಾರ್ಥಿ ತಾನು ಓದುತ್ತಿದ್ದ ಕಾಲೇಜೇ ಸರಿ ಎಲ್ಲ ಎಂದು ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯ ಭರತ್ ಭಾಸ್ಕರ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಈತ ಮಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ಹೋಟೆಲ್ ಮ್ಯಾನೇಜ್​ಮೆಂಟ್ ಕೋರ್ಸ್​ನಲ್ಲಿ ವ್ಯಾಸಂಗ ಮಾಡುತ್ತಿದ್ದ. ಮಂಗಳೂರಿನ ಕೊಟ್ಟಾರ ಬಳಿಯ ಪಿಜಿಯಲ್ಲಿ ವಿದ್ಯಾರ್ಥಿ ನೇಣು ಹಾಕಿಕೊಂಡಿದ್ದ.

ನನ್ನ ಸಾವಿಗೆ ಈ ಕಾಲೇಜೇ ಕಾರಣ. ಇಲ್ಲಿಗೆ ಸೇರಿ ನನ್ನ ಒಂದೂವರೆ ವರ್ಷ ವ್ಯರ್ಥವಾಗಿದೆ. ಇಲ್ಲಿ ಕಾಲೇಜು ಸರಿ ಇಲ್ಲ, ಸರಿಯಾದ ಸ್ಟಾಫ್​ ಇಲ್ಲ, ಕ್ಲಾಸೂ ಇಲ್ಲ. ನಮ್ಮಿಂದ ಹಣ ತೆಗೆದುಕೊಂಡು ಮೋಸ ಮಾಡಿದ್ದಾರೆ. ನನ್ನ ಸಾವಿಗೆ ಕಾಲೇಜೇ ಕಾರಣ, ನನ್ನಂತೆ ಬೇರೆ ವಿದ್ಯಾರ್ಥಿಗಳಿಗೆ ಮೋಸ ಆಗದಿರಲಿ ಎಂದು ಬಯಸುತ್ತೇನೆ ಎಂಬುದಾಗಿ ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಲೇಜಿನ ಮಾಲೀಕ ಹಾಗೂ ಪ್ರಾಧ್ಯಾಪಕರ ವಿರುದ್ಧ ಮಂಗಳೂರಿನ ಉರ್ವ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿಯ ತಂದೆ ದೂರು ದಾಖಲಿಸಿದ್ದಾರೆ.