ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಕಾಳಾವರ ಪಂಚಾಯಿತಿ ಎದುರು ಧರಣಿ ಸತ್ಯಾಗ್ರಹ ನಡೆಯಿತು. 
ಜಿಲ್ಲೆ

ಶಾಲೆಯ ಜಾಗ ಉಳಿಸಿಕೊಳ್ಳಲು ಹೋರಾಟ

ಇಂದಿರಾ ಎನ್ ಕೆ

ಕುಂದಾಪುರ: ಕಾಳಾವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕಾಪು ಸಂಜೀವ ಶೆಟ್ಟರು 67 ಸೆಂಟ್ಸ್ ಸ್ಥಳ ದಾನಪತ್ರದ ಮೂಲಕ ನೀಡಿದ್ದು, ದಾನಪತ್ರವೂ ಇದೆ. ಈ ಶಾಲೆಯಲ್ಲಿ 134 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಈ ಸ್ಥಳ ಪರಭಾರೆ ಆಗಬಾರದು. ಭೂಮಿಯ ಎಲ್ಲ ದಾಖಲೆಗಳು ಇದ್ದು, ಇಲಾಖೆ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಲ್ಲಿ ವಿಫಲವಾಗಿದೆ. ಇನ್ನಾದರೂ ಎಚ್ಚೆತ್ತುಕೊಂಡು ಶಾಲೆ ಉಳಿಸಿಕೊಳ್ಳುವಲ್ಲಿ ಹೋರಾಟ ನಡೆಸಬೇಕು ಎಂದು ಗ್ರಾಪಂ ಸದಸ್ಯ ರಾಮಚಂದ್ರ ನಾವಡ ಹೇಳಿದರು.

ಕಾಳಾವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆಸ್ತಿ ಪರಭಾರೆ ಆಗುತ್ತಿರುವುದನ್ನು ವಿರೋಧಿಸಿ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಕಾಳಾವರ ಪಂಚಾಯಿತಿ ಎದುರು ಗುರುವಾರ ನಡೆದ ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿದರು.

ಧರಣಿ ಸ್ಥಳಕ್ಕೆ ಆಗಮಿಸಿದ ಕುಂದಾಪುರ ತಹಶೀಲ್ದಾರ್ ಶೋಭಾಲಕ್ಷ್ಮೀ ಅವರಿಗೆ ಮನವಿ ಸಲ್ಲಿಸಿ, ಶಾಲೆ ಆಸ್ತಿಯ ಪಹಣಿ ತಿದ್ದುಪಡಿಗೆ ಒತ್ತಡ ಬಂದರೂ ತಾವು ಮಣಿಯಬಾರದು ಎಂದು ಒತ್ತಾಯಿಸಿ ತಹಸೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಕುಂದಾಪುರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ, ಗ್ರಾಪಂ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ದೀಪಾ ಶೆಟ್ಟಿ, ನಿವೃತ್ತ ಶಿಕ್ಷಕ ರಘುವೀರ್ ಕೆ., ಮೋಹನಚಂದ್ರ ಕಾಳಾವರ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಭರತ್ ಶೆಟ್ಟಿ, ರಂಜಿತ್ ಕುಮಾರ್ ಶೆಟ್ಟಿ, ಗ್ರಾಮ ಪಂಚಾಯಿತಿ ಸದಸ್ಯರು, ಹಳೇ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಹಳೇ ವಿದ್ಯಾರ್ಥಿಗಳು, ಗ್ರಾಮಸ್ಥರು, ಶಾಲಾಬಿವೃದ್ಧಿ ಸಮಿತಿ ಸದಸ್ಯರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.