ಕಾರ್ಕಳ: ಕನ್ನಡ ಭಾಷೆ, ಸಂಸ್ಕೃತಿ, ಜನಪದ ಕಲೆ ಇತಿಹಾಸ ಹಾಗೂ ಮಹತ್ವವನ್ನು ಯುವಜನತೆ ಅರಿತುಕೊಳ್ಳುವುದು ಅಗತ್ಯ. ಕನ್ನಡ ಉಳಿಸಿ ಬೆಳೆಸಬೇಕು ಎನ್ನುವ ಬದಲು ಕನ್ನಡವನ್ನು ಹೆಚ್ಚಾಗಿ ಬಳಸುವುದು ಅಗತ್ಯ ಎಂದು ನಟ, ಹಿನ್ನಲೆ ಧ್ವನಿ ಕಲಾವಿದ, ನಿರೂಪಕ ಬಡೆಕ್ಕಿಲ ಪ್ರದೀಪ್ ಅಭಿಪ್ರಾಯಪಟ್ಟರು.
ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯ, ಕಾಲೇಜಿನ ಐಸಿರಿ ಕನ್ನಡ ಸಮಿತಿ ಸಹಯೋಗದಲ್ಲಿ ಬುಧವಾರ ‘ದಿವ್ಯಾಂಕುರ’ ಕನ್ನಡ ರಾಜ್ಯೋತ್ಸವ ಸಮಾರಂಭ ಹಾಗೂ ಸಾಂಪ್ರದಾಯಿಕ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಉಪಪ್ರಾಂಶುಪಾಲ ಡಾ.ಐ.ಆರ್.ಮಿತ್ತಂತಾಯ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ರಾಜ್ಯೋತ್ಸವದ ಅಂಗವಾಗಿ ಕಾಲೇಜಿನಲ್ಲಿ ನಡೆಸಲಾದ ಹಲವಾರು ಸ್ಪರ್ಧೆಗಳ ವಿಜೇತರಿಗೆ ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು. ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಅವಂತಿ ಸ್ವಾಗತಿಸಿ, ಐಸಿರಿ ಕನ್ನಡ ಸಮಿತಿ ವಿದ್ಯಾರ್ಥಿ ನಾಯಕಿ ಸುರಭಿ ಎಸ್.ಶೆಟ್ಟಿ ವಂದಿಸಿದರು. ಸ್ಟೂಡೆಂಟ್ ವೆಲ್ಫೇರ್ ಡೀನ್ ಡಾ.ನರಸಿಂಹ ಬೈಲ್ಕೇರಿ ಕಾರ್ಯಕ್ರಮ ಸಂಘಟಿಸಿದರು. ವಿದ್ಯಾರ್ಥಿನಿ ಖ್ಯಾತಿ ನಿರೂಪಿಸಿದರು.
ಸಾಂಸ್ಕೃತಿಕ ಪ್ರದರ್ಶನ
ತಾಲೀಮ್, ಸ್ಟೀರಿಯೊ ಕ್ಲಬ್, ಕಲಾಸಂಗಮ, ಲಿಕ್ವಿಡ್ ಗೋಲ್ಡ್ ಮತ್ತು ಕಲಾಂಜಲಿ ವಿದ್ಯಾರ್ಥಿ ಸಂಘದ ಸದಸ್ಯರು ಕರ್ನಾಟಕದ ಶ್ರೀಮಂತ ಸಂಸ್ಕೃತಿಯನ್ನು ವಿಭಿನ್ನ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಪ್ರದರ್ಶಿಸಿದರು. ವಿದ್ಯಾರ್ಥಿಗಳಾದ ಐಶ್ವರ್ಯ ಜೈನ್ ಹಾಗೂ ಸಂಗಮೇಶ್ ಕಾರ್ಯಕ್ರಮ ನಿರೂಪಿಸಿದರು.