ಜಿಲ್ಲೆ

ಕೇರಳ ಗಡಿಯಲ್ಲಿ ಚುರುಕುಗೊಂಡ ತಪಾಸಣೆ; ಕರೊನಾ ನೆಗೆಟಿವ್ ವರದಿ ಇದ್ದರಷ್ಟೇ ಪ್ರವೇಶ

rashmirhebbur

ತಲಪಾಡಿ : ಕರೊನಾ ವೇಗವಾಗಿ ಹೆಚ್ಚುತ್ತಿರುವ ಕಾರಣದಿಂದಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತವು ತಲಪಾಡಿ ಸಹಿತ ಕೇರಳ ಗಡಿಗಳಲ್ಲಿ ತಪಾಸಣೆ ಚುರುಕುಗೊಳಿಸಿದ ಜೊತೆಗೇ ಸೋಮವಾರದಿಂದ ಚೆಕ್​ಪೋಸ್ಟ್​ನಲ್ಲಿ ನಡೆಸುತ್ತಿದ್ದ ಕೋವಿಡ್ ಆ್ಯಂಟಿಜನ್​​ ಟೆಸ್ಟ್‌ಗಳನ್ನು ಕೂಡ ಸ್ಥಗಿತಗೊಳಿಸಿದೆ.

ಇದುವರೆಗೆ ನೆಗೆಟಿವ್‌ ಸರ್ಟಿಫಿಕೇಟ್‌ ಇಲ್ಲದಿದ್ದರೂ ಸ್ಥಳದಲ್ಲೇ ಕೋವಿಡ್‌ ಟೆಸ್ಟ್‌ ಮಾಡಿ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುತ್ತಿತ್ತು. ಆದರೆ ಈಗ ರಾಜ್ಯ ಸರ್ಕಾರದ ಆದೇಶಕ್ಕನುಸಾರವಾಗಿ, ಆರ್​​ಟಿಪಿಸಿಆರ್​ ನೆಗೆಟಿವ್‌ ಸರ್ಟಿಫಿಕೇಟ್‌ ಇದ್ದರೆ ಮಾತ್ರವೇ ಜಿಲ್ಲೆಗೆ ಪ್ರವೇಶ ಎಂಬುದನ್ನು ಜಿಲ್ಲಾಡಳಿತ ಕಡ್ಡಾಯಗೊಳಿಸಿದೆ. ನೆಗೆಟಿವ್​ ವರದಿ ಇಲ್ಲದ ಯಾತ್ರಿಕರನ್ನು ವಾಪಸ್​ ಕಳುಹಿಸಲಾಗುತ್ತಿದೆ.

ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣ ಏರುಗತಿಯಲ್ಲಿದೆ. ಹಾಗಾಗಿ ಜಿಲ್ಲಾಡಳಿತ ಇದನ್ನು ಗಂಭೀರವಾಗಿ ತೆಗೆದುಕೊಂಡಿದೆ. ಆದರೆ ಈ ದಿಢೀರ್​ ಬದಲಾವಣೆಯಿಂದ ಅನಾನುಕೂಲ ಎದುರಿಸುತ್ತಿರುವ ಕಾಸರಗೋಡು ಭಾಗದ ಜನತೆ ಸಿಟ್ಟಿಗೆದ್ದಿದ್ದಾರೆ. ಕಾಸರಗೋಡು ಮತ್ತು ಮಂಗಳೂರು ಮಧ್ಯೆ ಸಂಚರಿಸುವ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುವು : ಮಂಗಳೂರು ವಿವಿ ವ್ಯಾಪ್ತಿಯ ಕಾಲೇಜುಗಳಲ್ಲಿ ಸೋಮವಾರದಿಂದ ಪದವಿ ಪರೀಕ್ಷೆ ಪ್ರಾರಂಭಗೊಂಡಿದ್ದು ಕಾಸರಗೋಡು ಭಾಗದಿಂದ ಮಂಗಳೂರಿನ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳಿಗೆ ಹಾಲ್‌ ಟಿಕೆಟ್‌ ತೋರಿಸಿದಲ್ಲಿ ಪ್ರವೇಶಕ್ಕೆ ಅನುವು ಮಾಡಿಕೊಡಲಾಗಿದೆ.

ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಮತ್ತು ಮಂಗಳೂರು ಪೊಲೀಸ್‌ ಆಯುಕ್ತ ಶಶಿಕುಮಾರ್‌ ಸೋಮವಾರ ಬೆಳಗ್ಗೆ ತಲಪಾಡಿಯ ಗಡಿ ಭಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇನ್ನೊಂದೆಡೆ, ಸ್ಥಳದಲ್ಲಿ ಜಿಲ್ಲಾಡಳಿತ ಹಾಗೂ ಮಂಗಳೂರು ಪೊಲೀಸರ ವಿರುದ್ಧ ಪದೇ ಪದೇ ನಿಂದನೆಯಲ್ಲಿ ತೊಡಗಿದ್ದ ಕೇರಳದ ಓರ್ವನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.