ಗುರುಪುರ: ಕರಿಯಂಗಳ ಗ್ರಾಮ ಪಂಚಾಯಿತಿಯ 2024-25ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆ ಮಂಗಳವಾರ ಪಂಚಾಯಿತಿ ಸಭಾಗೃಹದಲ್ಲಿ ನಡೆಯಿತು.
ಸಭೆಯಲ್ಲಿ ನೀರು, ದೀಪ, ರಸ್ತೆ ಮತ್ತಿತರ ಮೂಲಸೌಕರ್ಯಗಳ ಕೊರತೆ ಕುರಿತು ಗ್ರಾಮಸ್ಥರು ಗಂಭೀರ ಚರ್ಚೆ ನಡೆಸಿದರು. ಗ್ರಾಮಸ್ಥರ ಸಮಸ್ಯೆಗಳಿಗೆ ಪಂಚಾಯಿತಿ ಸ್ಪಂದಿಸುತ್ತಿದೆ ಎಂದು ಅಧ್ಯಕ್ಷೆ ರಾಧಾ ಎಲ್.ಕರಿಯಂಗಳ ತಿಳಿಸಿದರು.
ಸದ್ಯ ರಾತ್ರಿ ಹೊತ್ತು ಪ್ರಯಾಣಿಸುವ ಮಹಿಳಾ ಪ್ರಯಾಣಿಕರು ಪೊಳಲಿ ಸೇತುವೆಯಲ್ಲಿ ಬಸ್‌ನಿಂದ ಇಳಿದು ನಡೆದಾಡುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ, ಮಹಿಳಾ ಸುರಕ್ಷತೆ ನಿಟ್ಟಿನಲ್ಲಿ ಪೊಳಲಿ ಕಡೆಯಿಂದ ಸೇತುವೆಯ ಇಕ್ಕೆಲಗಳಲ್ಲಿ ದೀಪಗಳ ಅಳವಡಿಕೆ ಬಗ್ಗೆ ಪಂಚಾಯಿತಿ ಆಡಳಿತ ನಿರ್ಣಯ ತೆಗೆದುಕೊಂಡಿತು. ಸಿ.ಸಿ. ಕ್ಯಾಮರಾ ಅಳವಡಿಸುವಂತೆ ಕೆಲವರು ಆಗ್ರಹಿಸಿದರು.
ಪಂಚಾಯಿತಿ ಅಧ್ಯಕ್ಷೆ ರಾಧಾ ಎಲ್.ಕರಿಯಂಗಳ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ತಾಲೂಕು ಅಕ್ಷರ ದಾಸೋಹ ಇಲಾಖೆಯ ಸಹಾಯಕ ನಿರ್ದೇಶಕ ನೋಣಯ್ಯ ನಾಯಕ್ ನೋಡೆಲ್ ಅಧಿಕಾರಿಯಾಗಿದ್ದರು. ಪಂಚಾಯಿತಿ ದ್ವಿತೀಯ ದರ್ಜೆ ಲೆಕ್ಕ ಸಹಾಯಕಿ ಭಾರತಿ ಅವರು ಆಡಳಿತ ವರದಿ ಮಂಡಿಸಿದರು. ಆರೋಗ್ಯ, ಶಿಕ್ಷಣ, ಕಂದಾಯ, ಮೆಸ್ಕಾಂ ಮತ್ತಿತರ ಇಲಾಖಾ ಅಧಿಕಾರಿಗಳು ತಮ್ಮ ಇಲಾಖಾ ವ್ಯಾಪ್ತಿಯ ಯೋಜನೆಗಳ ಮಾಹಿತಿ ನೀಡಿದರು. ಉಪಾಧ್ಯಕ್ಷ ರಾಜು ಕೋಟ್ಯಾನ್ ಪಲ್ಲಿಪಾಡಿ, ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.
ಪಿಡಿಒ ಮಾಲಿನಿ ಸ್ವಾಗತಿಸಿ, ನಿರೂಪಿಸಿದರು. ಪಂಚಾಯಿತಿ ಸಿಬ್ಬಂದಿ ವರ್ಗ ಸಹಕರಿಸಿದರು.
ಪಂಚಾಯಿತಿಗೆ ಈಗ ಹೊಸ ತ್ಯಾಜ್ಯ ಸಂಗ್ರಹ ವಾಹನ ಬಂದಿದ್ದು, ಗ್ರಾಮಸ್ಥರು ಸದುಪಯೋಗ ಪಡೆದುಕೊಳ್ಳಬೇಕು. ಎಲ್ಲ ಮನೆಯವರು ಈ ವಾಹನಕ್ಕೆ ಮನೆ ತ್ಯಾಜ್ಯ ನೀಡಿ, ಪರಿಸರ ಮಾಲಿನ್ಯ ತಡೆಗೆ ಸಹಕರಿಸಬೇಕು. ಪರಿಸರ ಮಾಲಿನ್ಯ ಕಂಡು ಬಂದಲ್ಲಿ ತಪ್ಪಿತಸ್ಥರ ವಿರುದ್ಧ 5 ಸಾವಿರ ರೂ.ವರೆಗೆ ದಂಡ ಹೇರುವ ಬಗ್ಗೆ ಸಭೆಯಲ್ಲಿ ನಿರ್ಣಯಿಸಲಾಯಿತು.