ಬಂಟ್ವಾಳ: ಪಾಣೆಮಂಗಳೂರಿನಲ್ಲಿರುವ ಬ್ರಿಟಿಷರ ಕಾಲದ ಉಕ್ಕಿನ ಸೇತುವೆಯ ಧಾರಣಾಸಾಮರ್ಥ್ಯ ಪರೀಕ್ಷೆಯನ್ನು ಗುರುವಾರ ಸಂಜೆ ಎನ್‌ಐಟಿಕೆ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದೆ. ಎನ್‌ಐಟಿಕೆ ಡಾ.ಪಳನಿ ಸ್ವಾಮಿ ಹಾಗೂ ವಿಜಯನ್ ನೇತೃತ್ವದ ತಂಡ ಪರಿಶೀಲನೆ ನಡೆಸಿದ್ದು ವರದಿ ನೀಡಲಿದೆ.
ಬಂಟ್ವಾಳ ಪುರಸಭಾಧ್ಯಕ್ಷ ವಾಸು ಪೂಜಾರಿ, ಮುಖ್ಯಾಧಿಕಾರಿ ಮಹಮ್ಮದ್ ನಜೀರ್, ಹಿರಿಯ ಆರೋಗ್ಯ ನಿರೀಕ್ಷಕ ರತ್ನ ಪ್ರಸಾದ್, ಎಂಜಿನಿಯರ್ ಡೊನೆನಿಕ್ ಡಿಮೆಲ್ಲೋ ಉಪಸ್ಥಿತರಿದ್ದರು.
ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಾಣಗೊಂಡಿದ್ದ ಪಾಣೆಮಂಗಳೂರು ಉಕ್ಕಿನ ಸೇತುವೆಯ ರಕ್ಷಣೆಯ ಉದ್ದೇಶದಿಂದ ಭಾರಿ ವಾಹನಗಳ ಸಂಚಾರ ನಿಷೇಧಿಸಲು ಕಬ್ಬಿಣದ ಗಾರ್ಡ್ ಅಳವಡಿಸಲಾಗಿತ್ತು. ಕೆಲ ದಿನಗಳ ಹಿಂದೆ ಸರಕು ಸಾಗಾಟದ ವಾಹನವೊಂದು ಗುದ್ದಿ ಕಬ್ಬಿಣದ ಗಾರ್ಡ್ ಉರುಳಿ ಬಿದ್ದಿತ್ತು. ಈ ಸಂದರ್ಭ ಬಂಟ್ವಾಳ ತಹಸೀಲ್ದಾರ್ ಈ ಸೇತುವೆಯಲ್ಲಿ ಎಲ್ಲ ವಾಹನಗಳ ಸಂಚಾರ ನಿಷೇಧಿಸಿ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಟ್ರಾಫಿಕ್ ಪೊಲೀಸರು ಬ್ಯಾರಿಕೇಡ್ ಇರಿಸಿ ವಾಹನ ಸಂಚಾರವನ್ನು ನಿಷೇಧಿಸಿದ್ದರು. ಅದೇ ದಿನ ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಈ ವಿಚಾರ ಚರ್ಚೆಯಾಗಿ ಲು ವಾಹನಗಳ ಸಂಚಾರಕ್ಕೆ ಅವಕಾಶ ನೀಡುವಂತೆ ಸದಸ್ಯರು ಆಗ್ರಹಿಸಿದ್ದರು. ಅಂದು ಮಧ್ಯಾಹ್ನದ ವೇಳೆಗೆ ಪುರಸಭೆಯ ಇಬ್ಬರು ಸದಸ್ಯರ ಮುಂದಾಳತ್ವದಲ್ಲಿ ಸಾರ್ವಜನಿಕರು ಬ್ಯಾರಿಕೇಡ್ ತೆರವುಗೊಳಿಸಿದ್ದರು. ಎರಡೇ ದಿನಗಳಲ್ಲಿ ಮುರಿದು ಬಿದ್ದಿದ್ದ ಕಬ್ಬಿಣದ ಗಾರ್ಡನ್ನು ಪುರಸಭೆ ದುರಸ್ತಿಗೊಳಿಸಿ ಮತ್ತೆ ಅಳವಡಿಸಿತ್ತು. ಬಳಿಕ ಲು ವಾಹನಗಳ ಸಂಚಾರ ಹಿಂದಿನಂತೆಯೇ ಮುಂದುವರೆದಿತ್ತು. ಈ ನಡುವೆ ಪುರಸಭಾಧ್ಯಕ್ಷ ವಾಸು ಪೂಜಾರಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿಯಾಗಿ ಲುಘುವಾಹನಗಳ ಸಂಚಾರಕ್ಕೆ ಅನುಮತಿ ಕೇಳಿದ್ದರು. ಮಾತ್ರವಲ್ಲದೆ ಸೇತುವೆಯ ಧಾರಣಾ ಸಾಮರ್ಥ್ಯ ಪರೀಕ್ಷೆ ನಡೆಸುವಂತೆ ಎನ್‌ಐಟಿಕೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.