ಶತಮಾನದ ಕಟ್ಟಡ ನೆಲಸಮ!: ತಿರುವೈಲು ಶಾಲೆ ಕೆಡವಲು ಮುಂದಾದ ಜಿಲ್ಲಾಡಳಿತ : ಶಾಲಾ ಆಡಳಿತದಿಂದ ಸಮ್ಮತಿ

New Project (31)
Published on

ಧನಂಜಯ ಗುರುಪುರ

ವಾಮಂಜೂರು ತಿರುವೈಲು ಸರ್ಕಾರಿ ಪ್ರೌಢಶಾಲೆಯ ಸಭಾಗೃಹ, ಸ್ಮಾರ್ಟ್‌ಕ್ಲಾಸ್ ಸಹಿತ ಒಟ್ಟು 10 ತರಗತಿ ಕೊಠಡಿ ಒಳಗೊಂಡ ಹಳೇ ಕಟ್ಟಡ ನೆಲಸಮಗೊಳಿಸಲು ಮುಂದಾದ ಜಿಪಂ/ ತಾಪಂ ಕಚೇರಿ ಶಾಲಾ ಆಡಳಿತಕ್ಕೆ ನೋಟಿಸ್ ಜಾರಿ ಮಾಡಿದೆ.

ವಿಸ್ತರಣೆಗೊಳ್ಳುತ್ತಿರುವ ಎನ್‌ಎಚ್ 169ರ ಕೆತ್ತಿಕಲ್ ಹತ್ತಿರದಲ್ಲಿ ಈ ವರ್ಷ ಶತಮಾನೋತ್ಸವ ಆಚರಿಸಿರುವ ತಿರುವೈಲು ಸರ್ಕಾರಿ ಶಾಲೆ ಕಟ್ಟಡವಿದೆ. ಹೆದ್ದಾರಿಗೆ ಪಕ್ಕದಲ್ಲಿ, ವಿಶಾಲ ಮುರ ಕಲ್ಲಿನ ಮೇಲೆ ನಿರ್ಮಾಣಗೊಂಡ ಹಳೇ ಕಟ್ಟಡ ಇನ್ನೂ 50 ವರ್ಷ ಬಾಳಿಕೆ ಬರುವಂತಿದ್ದರೂ, ಶಾಲಾ ಮಕ್ಕಳ ಸುರಕ್ಷತೆ ಮತ್ತು ಹಳೇ ಕಟ್ಟಡ ಹೆದ್ದಾರಿಗೆ ಬೀಳಬಹುದೆಂಬ ದೂರದೃಷ್ಟಿಯಿಂದ ಜಿಪಂ/ತಾಪಂ ಕೆಡವಲು ಮುಂದಾಗಿದೆ ಎಂದು ಶಾಲೆ ಹಿರಿಯ ಹಳೇ ವಿದ್ಯಾರ್ಥಿಗಳು ಮಾಹಿತಿ ನೀಡಿದರು.

ತುರ್ತು ಸಭೆಯಲ್ಲಿ ಚರ್ಚೆ: ಜಿಪಂ/ತಾಪಂ ಈಗಾಗಲೇ ಕಳುಹಿಸಿರುವ ನೋಟಿಸ್‌ಗೆ ಉತ್ತರವಾಗಿ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ, ಹಳೇ ವಿದ್ಯಾರ್ಥಿ ಸಂಘ, ವಿದ್ಯಾಬೋಧಿನಿ ಎಜುಕೇಶನ್ ಟ್ರಸ್ಟ್ ಮತ್ತು ಶಾಲಾ ಶತಮಾನೋತ್ಸವ ಸಮಿತಿ ಜಂಟಿಯಾಗಿ ಭಾನುವಾರ ತುರ್ತು ಸಭೆಯಲ್ಲಿ ಚರ್ಚಿಸಿ ಕೆಲವು ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ಎಸ್‌ಡಿಎಂಸಿ ಅಧ್ಯಕ್ಷ ರಾಕೇಶ್ ಶೆಟ್ಟಿ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಿರೀಶ್ ಆಚಾರ್ಯ, ವಿದ್ಯಾಬೋಧಿನಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ರಘು ಸಾಲ್ಯಾನ್, ಸಂಘ-ಸಂಸ್ಥೆಗಳು, ಟ್ರಸ್ಟ್ ಹಾಗೂ ಶಾಲಾ ಸಮಿತಿ ಪದಾಧಿಕಾರಿಗಳು, ನಿವೃತ್ತ ಶಿಕ್ಷಕ ಗೋಪಾಲ್ ಯು., ನಿವೃತ್ತ ಮುಖ್ಯಶಿಕ್ಷಕಿ ಪುಷ್ಪಾವತಿ, ಪ್ರಭಾರ ಮುಖ್ಯ ಶಿಕ್ಷಕಿ ವಿದ್ಯಾ, ಶಿಕ್ಷಕಿಯರು, ಮಕ್ಕಳ ಪಾಲಕರು, ಹಳೇ ವಿದ್ಯಾರ್ಥಿಗಳು, ಶಿಕ್ಷಣ ಪ್ರೇಮಿಗಳು ಇದ್ದು, ಶಾಲೆಯ ಭವಿಷ್ಯದ ಹಿತದೃಷ್ಟಿಯಿಂದ ಕೈಗೊಳ್ಳಲಾದ ನಿರ್ಣಯಕ್ಕೆ ಸಮ್ಮತಿ ವ್ಯಕ್ತಪಡಿಸಿದರು.

ನಿರ್ಣಯ ಹೀಗಿದೆ: ಶಾಲಾ ಹಳೇ ಕಟ್ಟಡ ನೆಲಸಮಗೊಳಿಸಲು ಎಸ್‌ಡಿಎಂಸಿಯ ಪೂರ್ಣ ಅನುಮತಿ ಇದೆ. ಆ ಕಾರ್ಯ ಜಿಪಂನಿಂದಾಗಬೇಕು. ಎಸ್‌ಡಿಎಂಸಿ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ. ಶಾಲಾ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಕಟ್ಟಡ ಕೆಡವಲಾದ ಜಾಗದಲ್ಲಿ ತುರ್ತಾಗಿ ಆವರಣ ಗೋಡೆ ನಿರ್ಮಿಸಬೇಕು. ಶಾಲೆಯಲ್ಲಿ ಈಗ ಮಕ್ಕಳ ಸಂಖ್ಯೆ 350 ದಾಟಿರುವುದರಿಂದ ಹೊಸ ಶೌಚಗೃಹ ನಿರ್ಮಿಸಿದ ಬಳಿಕ ಹಳೇ ಶೌಚಗೃಹ ಕಟ್ಟಡ ನೆಲಸಮಗೊಳಿಸಬೇಕು. ಜತೆಗೆ ಈಗಾಗಲೇ ಮಂಜೂರಾತಿಯಾಗಿರುವ ಅನುದಾನದಲ್ಲಿ ಶಾಲಾ ಆವರಣದಲ್ಲಿ ಹೊಸ ಕಟ್ಟಡ ನಿರ್ಮಿಸಲು ಕ್ರಮ ಜರುಗಿಸಬೇಕು.

ಶಾಲೆ ಹಳೇ ಕಟ್ಟಡದ ಪಕ್ಕದಲ್ಲಿ ಎನ್‌ಎಚ್ ಪ್ರಾಧಿಕಾರ ನಿರ್ಮಿಸಿರುವ ತಡೆಗೋಡೆ ಇನ್ನಷ್ಟು ಎತ್ತರಿಸಿದರೆ ಹಳೇ ಕಟ್ಟಡ ಉಳಿಸಿಕೊಳ್ಳಲು ಸಾಧ್ಯವಿದೆ ಎಂದು ದ.ಕ. ಜಿಲ್ಲೆಯ ಹೊಸ ಜಿಲ್ಲಾಧಿಕಾರಿಯವರು ನನ್ನಲ್ಲಿ ಹೇಳಿದ್ದಾರೆ. ಈಗ ಹಳೇ ಕಟ್ಟಡ ಖಾಲಿಯಾಗಿದೆ. ಈ ಹಿಂದೆ ಚುನಾವಣೆ, ಕೋವಿಡ್, ನೆರೆ ಸಂದರ್ಭ ಈ ಕಟ್ಟಡ ಪರಿಣಾಮಕಾರಿಯಾಗಿ ಬಳಕೆಯಾಗಿದ್ದು, ಕಟ್ಟಡ ಉಳಿಸಿಕೊಂಡಲ್ಲಿ ಭವಿಷ್ಯದಲ್ಲೂ ಇದರ ಸದುಪಯೋಗ ತಳ್ಳಿಹಾಕುವಂತಿಲ್ಲ. ರಘು ಸಾಲ್ಯಾನ್ ಅಧ್ಯಕ್ಷ, ವಿದ್ಯಾಬೋಧಿನಿ ಎಜುಕೇಶನ್ ಟ್ರಸ್ಟ್ ಶಾಲೆ ವತಿಯಿಂದಲೇ ಹಳೇ ಕಟ್ಟಡ ನೆಲಸಮಗೊಳಿಸಬೇಕು ಎಂಬುದು ಜಿಲ್ಲಾಡಳಿತದ(ಜಿಪಂ/ತಾಪಂ) ಸಮಂಜಸ ಆದೇಶವಲ್ಲ. ಸರ್ಕಾರಿ ಕಟ್ಟಡ ಎಂದ ಮೇಲೆ ಸರ್ಕಾರವೇ ಟೆಂಡರ್ ಕರೆದು, ಹಳೇ ಕಟ್ಟಡ ನೆಲಸಮಗೊಳಿಸಿ, ಅದರಲ್ಲಿರುವ ಕಲ್ಲು ಹಾಗೂ ಇತರ ಸೊತ್ತುಗಳ ಏಲಂನಿಂದ ಬರುವ ಮೊತ್ತ ಹೊಸ ಕಟ್ಟಡಕ್ಕೆ ವಿನಿಯೋಗಿಸಬೇಕು. ಆವರಣ ಗೋಡೆಗೆ ಹಳೇ ಕಲ್ಲು ಬಳಸಬಹುದು. ಹೇಮೇಂದ್ರ ಎಚ್. ಟ್ರಸ್ಟಿ, ವಿದ್ಯಾಬೋಧಿನಿ ಎಜುಕೇಶನ್ ಟ್ರಸ್ಟ್ ಹಳೇ ಕಟ್ಟಡ ಗಟ್ಟಿಮುಟ್ಟಾಗಿದೆ. ಕೆಡವಲೇ ಬೇಕೆನ್ನುಷ್ಟರ ಮಟ್ಟಿಗೆ ಶಿಥಿಲಗೊಂಡಿಲ್ಲ. ಹೊಸ ಕಟ್ಟಡ ನಿರ್ಮಿಸುವುದಾದರೆ, ಹಳೇ ಕಟ್ಟಡ ನೆಲಸಮಗೊಳಿಸಬಹುದು. ಆದರೆ ಅದರ ಪೂರ್ಣ ಜವಾಬ್ದಾರಿ ಸರ್ಕಾರವೇ ಹೊರಬೇಕು. ಹೊಸ ಕಟ್ಟಡ ನಿರ್ಮಾಣದವರೆಗೆ ಹಳೇ ಕಟ್ಟಡಕ್ಕೆ ಹೊಂದಿಕೊಂಡಂತೆ ಇನ್ಫೋಸಿಸ್ ಮತ್ತು ರೋಟರಿ ಕೊಡುಗೆಯಾಗಿ ನಿರ್ಮಿಸಲಾದ ಹೊಸ ಶೌಚಗೃಹ ಕೆಡವಬಾರದು. ಹೊಸ ಕಟ್ಟಡ ನಿರ್ಮಾಣ ಕಾರ್ಯ ಶೀಘ್ರ ಆರಂಭವಾಗಲಿ. ಗೋಪಾಲ ಯು. ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ https://www.vijayavani.net/health-check-up-camp-in-hosangady https://www.vijayavani.net/murder-case-3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net