ವಿಜಯವಾಣಿ ಸುದ್ದಿಜಾಲ ಬೈಂದೂರು
ಸಂಗೀತ ಲೋಕದಲ್ಲಿ ವಿಶೇಷ ಸ್ಥಾನ ಪಡೆದಿದ್ದ ಉಪ್ಪುಂದ ಶ್ರೀನಿವಾಸ ಪ್ರಭು ಅವರು ಅತ್ಯುತ್ತಮ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದರು. ಅನೇಕ ನಾಟಕ, ಭಾವಗೀತೆಗಳಿಗೆ ಸಂಗೀತ ನೀಡಿದ ಅವರು, ತಮ್ಮ ಮಧುರ ಸ್ವರಸೃಷ್ಟಿಯಿಂದ ಸಂಗೀತಪ್ರಿಯರ ಮನಸ್ಸು ಗೆದ್ದಿದ್ದರು. ಜತೆಗೆ ರಂಗನಟ, ನಿರ್ದೇಶಕ, ಪ್ರಸಾದನ ಕಲಾವಿದರಾಗಿಯೂ ಪರಿಣತಿ ಪಡೆದ್ದರು ಎಂದು ಲಾವಣ್ಯದ ಮಾಜಿ ಅಧ್ಯಕ್ಷ ಗಿರೀಶ್ ಬೈಂದೂರು ಹೇಳಿದರು.
ಲಾವಣ್ಯ ರಂಗಮನೆಯಲ್ಲಿ ಸೋಮವಾರ ಆಯೋಜಿಸಿದ್ದ ಲಾವಣ್ಯದ ಸ್ಥಾಪಕಾಧ್ಯಕ್ಷ ದಿ.ಯು. ಶ್ರೀನಿವಾಸ ಪ್ರಭು ಅವರ ನುಡಿನಮನ ಕಾರ್ಯಕ್ರಮದಲ್ಲಿ ಮತನಾಡಿದರು.
ಲಾವಣ್ಯದ ವ್ಯವಸ್ಥಾಪಕ ಗಣಪತಿ ಎಸ್. ಮಾತನಾಡಿ, ಕನ್ನಡದ ಕಾವ್ಯಗಳಿಗೆ ಅವರು ನೀಡಿದ ಸಂಗೀತದಿಂದ ಕಾವ್ಯದ ಭಾವನೆಗಳನ್ನು ಮತ್ತಷ್ಟು ಜೀವಂತಗೊಳಿಸಿತು. ಪ್ರಭು ಅವರ ಸಾಧನೆಗೆ ರಾಜ್ಯಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದು, ಅನೇಕ ಪ್ರಶಸ್ತಿ-ಪುರಸ್ಕಾರಕ್ಕೆ ಭಾಜನರಾಗಿದ್ದರು. ಕನ್ನಡ ಸಂಗೀತ ಲೋಕದಲ್ಲಿ ಅವರ ಕೊಡುಗೆ ಚಿರಸ್ಮರಣೀಯ ಎಂದರು.
ಲಾವಣ್ಯದ ಸದಸ್ಯರಾದ ಕೆ. ರವೀಂದ್ರ ಕಿಣಿ, ಸುಬ್ರಹ್ಮಣ್ಯ ಜಿ.ಉಪ್ಪುಂದ, ಗುರುಪ್ರಸಾದ್ ನಾಯಕ್ ಕಂಬದಕೋಣೆ, ಮಂಜುನಾಥ ಶಿರೂರು, ಗೋಪಾಲಕೃಷ್ಣ ಜೋಷಿ ಉಪ್ಪುಂದ, ತಿಮ್ಮಪ್ಪ ಶೇರುಗಾರ್ ಸಹಿತ ಅನೇಕರು ಪ್ರಭು ಅವರೊಂದಿಗಿನ ಒಡನಾಟ ಸ್ಮರಿಸಿದರು. ಕಾರ್ಯದರ್ಶಿ ಹರೇಗೋಡು ವಿಶ್ವನಾಥ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.