ಜಿಲ್ಲೆ

ಕಾಸರಗೋಡಿನಲ್ಲಿ ವಿಶೇಷ ರ‌್ಯಾಲಿ :ಅಂಚೆ ಚೀಟಿ ಬಿಡುಗಡೆ : ಗಮನಸೆಳೆದ ಬ್ಯಾಂಡ್ ಮೇಳ, ದಫ್

ಸೌಮ್ಯ ಆರ್

ಕಾಸರಗೋಡು: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಶಿಕ್ಷಣ ಇಲಾಖೆ ಹಾಗೂ ಕಾಸರಗೋಡು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ವತಿಯಿಂದ ಮಕ್ಕಳ ದಿನ ಆಚರಿಸಲಾಯಿತು.

ವಿಶೇಷ ರ‌್ಯಾಲಿ ಆಯೋಜಿಸಲಾಗಿತ್ತು. ಅಸಾಪ್ ಆವರಣದಲ್ಲಿ ಶಾಸಕ ಎನ್.ಎ.ನೆಲ್ಲಿಕುನ್ನು ಸಮಾರಂಭ ಉದ್ಘಾಟಿಸಿದರು. ವಿಶೇಷ ವಾಹನದಲ್ಲಿ ರಾಷ್ಟ್ರಪತಿ, ಮುಖ್ಯಮಂತ್ರಿ, ಸಭಾಪತಿ, ವಿರೋಧ ಪಕ್ಷದ ನಾಯಕ ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳನ್ನು ಬಿಂಬಿಸುವ ವೇಷಧಾರಿಗಳು ಪಾಲ್ಗೊಂಡಿದ್ದರು.

ಜಿಲ್ಲೆಯ 12 ಶಾಲೆಗಳ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ರ‌್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಎಸ್‌ಪಿಸಿ, ಎನ್ನೆಸ್ಸೆಸ್, ಸ್ಕೌಟ್ಸ್ ಮತ್ತು ಗೈಡ್ಸ್, ರೆಡ್‌ಕ್ರಾಸ್, ಬುಲ್‌ಬುಲ್, ಬ್ಯಾಂಡ್ ಮೇಳ, ದಫ್ ಇತ್ಯಾದಿ ರ‌್ಯಾಲಿಗೆ ಮೆರುಗು ನೀಡಿತ್ತು. ಸನ್‌ರೈಸ್ ಪಾರ್ಕ್‌ನಲ್ಲಿ ಸ್ಥಾಪಿಸಲಾದ ವೇದಿಕೆಯಲ್ಲಿ ರ‌್ಯಾಲಿ ಸಂಪನ್ನಗೊಂಡಿತು.

ಮಕ್ಕಳ ರಾಷ್ಟ್ರಪತಿಯಾಗಿ ಆಯ್ಕೆ ಮಾಡಲಾದ ಕೆ.ಎಸ್.ವಸುಂಧರಾ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಪ್ರಧಾನಮಂತ್ರಿ ಅಬೆಲ್ ಜಿನ್ಸ್ ಉದ್ಘಾಟಿಸಿದರು. ವಿದ್ಯಾರ್ಥಿ ಪ್ರತಿಪಕ್ಷ ಮುಖಂಡೆ ಎಂ.ಅವನಿ ಮುಖ್ಯ ಭಾಷಣ ಮಾಡಿದರು. ಕಾಸರಗೋಡು ಜಿಪಂ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಅಂಚೆಚೀಟಿ ಬಿಡುಗಡೆ ಮಾಡಿದರು.

ಎ.ಡಿ.ಎಂ.ಪಿ. ಅಖಿಲ್ ಸಂದೇಶ ನೀಡಿದರು. ಮಕ್ಕಳ ಕಲ್ಯಾಣ ಸಮಿತಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಒ.ಎಂ.ಬಾಲಕೃಷ್ಣನ್, ಜಿಲ್ಲಾ ವಾರ್ತಾ ಅಧಿಕಾರಿ ಎಂ.ಮಧುಸೂದನನ್, ಡಿಸಿಪಿಒ ಶೈನಿ ಐಸಾಕ್, ಕಾಸರಗೋಡು ಡಿಇಒ ವಿ.ದಿನೇಶ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಕಾರ್ಯದರ್ಶಿ ಟಿ.ಎಂ.ಎ.ಕರೀಂ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಕೋಶಾಧಿಕಾರಿ ಸಿ.ವಿ.ಗಿರೀಶನ್, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಕಾರ್ಯದರ್ಶಿ ಜಯನ್ ಕಾಡಗಂ ಮೊದಲಾದವರು ಉಪಸ್ಥಿತರಿದ್ದರು.