ಕಾಸರಗೋಡು: ಹಸಿರು ಕೇರಳ ಮಿಷನ್ ನೇತೃತ್ವದಲ್ಲಿ ತೆಂಗಿನ ತೋಟಕ್ಕೆ ನೀರುಣಿಸುವ ಮೂಲಕ ಮಣ್ಣು, ಜಲ ಸಂರಕ್ಷಣೆಯ ಜನಪ್ರಿಯ ಅಭಿಯಾನ ಪಂಚಾಯಿತಿಮಟ್ಟದ ಉದ್ಘಾಟನೆ, ಗ್ರಾಮ ಪಂಚಾಯಿತಿಯ ಜಯಪುರದಲ್ಲಿ ಜರುಗಿತು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅಭಿಯಾನಕ್ಕೆ ಚಾಲನೆ ನೀಡಿದರು. ತೆಂಗಿನ ಇಳುವರಿಯನ್ನು ಹೆಚ್ಚಿಸುವ ಉದ್ದೇಶದ ಜತೆಗೆ, ನೀರಿನ ಸಂರಕ್ಷಣಾ ಚಟುವಟಿಕೆಯೂ ಯೋಜನೆಯಲ್ಲಿ ಒಳಗೊಂಡಿದೆ. ಬಿರುಸಿನ ಮಳೆಗೆ ಹರಿದು ಪೋಲಾಗುವ ನೀರನ್ನು ಅಲ್ಲಲ್ಲಿ ತಡೆಗಟ್ಟಿ ಭೂಮಿಯೊಳಗೆ ಇಂಗಿಸಲಾಗುತ್ತಿದೆ. ತೆಂಗಿನಮರದ ಸುತ್ತಲೂ ಕಟ್ಟೆ ನಿರ್ಮಾಣಮಾಡಿ, ಹರಿದು ಬರುವ ನೀರನ್ನು ಇವುಗಳಿಗೆ ತುಂಬುವಂತೆ ಮಾಡುವ ಮೂಲಕ ಅಂತರ್ಜಲಮಟ್ಟ ಹೆಚ್ಚಿಸುವುದರೊಂದಿಗೆ ನಾವು ಎದುರಿಸುತ್ತಿರುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್, ನವಕೇರಳ ಕ್ರಿಯಾಯೋಜನೆ ಜಿಲ್ಲಾ ಸಂಯೋಜಕ ಕೆ.ವಿ.ವ್ಯಾಟ್ಸನ್, ಡಾ.ಪಿ.ವಿ.ಅರುಣ್, ಎಂ. ಸುನೀಲ್ ಕುಮಾರ್ ಉಪಸ್ಥಿತರಿದ್ದರು.