

ಎಕೆಪಿಎ ಬದಿಯಡ್ಕ ಘಟಕ ಸಭೆಯಲ್ಲಿ ಅಪ್ಪಣ್ಣ ಹೇಳಿಕೆ ಬದಿಯಡ್ಕ: ಛಾಯಾಗ್ರಹಣ ರಂಗ ಎದುರಿಸುತ್ತಿರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಮುಂದುವರಿಯಬೇಕಾಗಿದೆ. ಆನ್ಲೈನ್ ವ್ಯವಸ್ಥೆ ನಮ್ಮ ಉದ್ಯಮಕ್ಕೆ ದೊಡ್ಡ ಹೊಡೆತವನ್ನೇ ನೀಡಿದೆ. ದೊಡ್ಡ ಮೊತ್ತದ ಹಣ ವ್ಯಯಿಸಿ ಕ್ಯಾಮರಾ ಹಾಗೂ ಇನ್ನಿತರ ಅನುಬಂಧ ಸಾಮಾಗ್ರಿಗಳನ್ನು ಖರೀದಿಸಿದ ಛಾಯಾಗ್ರಾಹಕರು ಸಂಕಷ್ಟದಲ್ಲಿದ್ದಾರೆ ಎಂದು ಎಕೆಪಿಎ ಕುಂಬಳೆ ವಲಯ ಉಪಾಧ್ಯಕ್ಷ ಅಪ್ಪಣ್ಣ ಸೀತಾಂಗೋಳಿ ಹೇಳಿದರು.
ನೀರ್ಚಾಲು ಶ್ರೀ ಧರ್ಮಶಾಸ್ತಾ ಭಜನಾ ಮಂದಿರದ ಸಭಾಭವನದಲ್ಲಿ ಶನಿವಾರ ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಬದಿಯಡ್ಕ ಘಟಕದ 40ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.
ಎಕೆಪಿಎ ಬದಿಯಡ್ಕ ಘಟಕದ ಅಧ್ಯಕ್ಷ ಶ್ಯಾಮಪ್ರಸಾದ ಸರಳಿ ಅಧ್ಯಕ್ಷತೆ ವಹಿಸಿದ್ದರು. ಎಕೆಪಿಎ ರಾಜ್ಯ ಕಾರ್ಯದರ್ಶಿ ಹರೀಶ್ ಪಾಲಕುನ್ನು, ಕಾಸರಗೋಡು ಜಿಲ್ಲಾ ಅಧ್ಯಕ್ಷ ಕೆ.ಸಿ.ಅಬ್ರಹಾಂ, ಕೋಶಾಧಿಕಾರಿ ಸುನಿಲ್ ಕುಮಾರ್ ಪಿ.ಟಿ., ಜಿಲ್ಲಾ ಸಮಿತಿ ಸದಸ್ಯರಾದ ವಿಜಯನ್ ಶೃಂಗಾರ್, ವೇಣುಗೋಪಾಲ ಎ., ಕುಂಬಳೆ ವಲಯ ಕಾರ್ಯದರ್ಶಿ ನಿತ್ಯಪ್ರಸಾದ್, ಬದಿಯಡ್ಕ ಘಟಕ ಇನ್ಚಾರ್ಜ್ ಸುರೇಶ್ ಆಚಾರ್ಯ, ಸದಸ್ಯರು ಪಾಲ್ಗೊಂಡಿದ್ದರು.
ಬದಿಯಡ್ಕ ಘಟಕ ಕಾರ್ಯದರ್ಶಿ ಬಾಲಕೃಷ್ಣ ನಿಡುಗಳ ವಾರ್ಷಿಕ ವರದಿ, ಕೋಶಾಧಿಕಾರಿ ನಾರಾಯಣ ವೋಡಂಗಲ್ಲು ಲೆಕ್ಕಪತ್ರ ಮಂಡಿಸಿದರು.