ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಕೇಂದ್ರ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರ(ಸಿಪಿಸಿಆರ್‌ಐ-ಐಸಿಎಆರ್) ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಯಿತು. ಕಾಸರಗೋಡು ಜಿಲ್ಲಾ ಪೊಲೀಸ್ ಮುಖ್ಯಸ್ಥೆ ಶಿಲ್ಪಾ ಡಿ. ಮಾತನಾಡಿ, ಮಹಿಳೆಯರು ತಮ್ಮ ಸಾಮರ್ಥ್ಯ ಗುರುತಿಸಿ ಆಯ್ಕೆ ಮಾಡಿದ ಕ್ಷೇತ್ರದಲ್ಲಿ ಸಾಧನೆ ಮೂಲಕ ಗುರಿ ತಲುಪಲು ಶ್ರಮಿಸಬೇಕು ಎಂದು ತಿಳಿಸಿದರು.
ಐಸಿಎಆರ್-ಸಿಪಿಸಿಆರ್‌ಐ ನಿರ್ದೇಶಕ ಡಾ.ಕೆ.ಬಿ.ಹೆಬ್ಬಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಿಪಿಸಿಆರ್‌ಐ ಒಂದು ಸಂಸ್ಥೆಯಾಗಿ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡುತ್ತಿದೆ. ಸಂಸ್ಥೆ ಉತ್ತಮ ಶೇಕಡಾವಾರಿನೊಂದಿಗೆ ಮಹಿಳಾ ಸಿಬ್ಬಂದಿಯನ್ನು ಒಳಗೊಂಡಿದೆ. ವ್ಯಕ್ತಿತ್ವಕ್ಕಿಂತ ಕಾರ್ಯಕ್ಷಮತೆ ಮುಖ್ಯವಾಗುವುದಾಗಿ ತಿಳಿಸಿದರು.
ಮುಖ್ಯ ಹಣಕಾಸು ಮತ್ತು ಲೆಕ್ಕಪತ್ರ ಅಧಿಕಾರಿ(ಸಿಎಫ್‌ಎಓ) ಶ್ರೀ ರಾಮ್ ಅವತಾರ್ ಪರಾಶರ್ ಮಹಿಳಾ ಶಕ್ತಿ ಕುರಿತು ವಿಚಾರ ಮಂಡಿಸಿದರು. ತೆಂಗು ಆಧಾರಿತ ಉದ್ದಿಮೆಯಲ್ಲಿ ಯಶಸ್ಸು ಸಾಧಿಸಿದ ಮಹಿಳಾ ಉದ್ಯಮಿ, ಕಾಸರಗೋಡಿನ ಪರಕ್ಕಟ್ಟಾದ ಮೆಸ್ಸರ್ಸ್ ಬ್ಲೆಸ್ ಫಾರ್ಮ್ ಫ್ಲೇವ್‌ನ ಮಾಲಕಿ ಅನ್ನಮ್ಮ ಟಿ.ಎಂ., ಸಿಪಿಸಿಆರ್‌ಐ ಕಾಸರಗೋಡಿನ ಇಬ್ಬರು ಅತ್ಯುತ್ತಮ ಮಹಿಳಾ ಉದ್ಯೋಗಿಗಳನ್ನು ಗೌರವಿಸಲಾಯಿತು. ತರಬೇತಿ ಕಾರ್ಯಕ್ರಮ ಪೂರ್ಣಗೊಳಿಸಿದ ತರಬೇತುದಾರರಿಗೆ ಪ್ರಮಾಣಪತ್ರ ವಿತರಣೆ, ಬಹುಮಾನ ವಿತರಣೆ ನಡೆಯಿತು. ತಾಂತ್ರಿಕ ಸಹಾಯಕ ದಿನೇಶ್ ಕುಮಾರ್ ಎನ್. ಕವನ ಸಂಕಲನ ವಾಚಿಸಿದರು.
ಬೆಳೆ ಸುಧಾರಣಾ ವಿಭಾಗ ಮುಖ್ಯಸ್ಥರು, ಮಹಿಳಾ ಕಲ್ಯಾಣ ಸಮಿತಿ(ಡಬ್ಲುೃಡಬ್ಲುೃಸಿ) ಅಧ್ಯಕ್ಷೆ ಡಾ.ವಿ.ನಿರಾಲ್ ಸ್ವಾಗತಿಸಿದರು. ಮಹಿಳಾ ಕಲ್ಯಾಣ ಸಮಿತಿ ಕಾರ್ಯದರ್ಶಿ ಅಶಾಮೋಲ್ ಇ.ಪಿ. ವಂದಿಸಿದರು.