ಶಿವಮೊಗ್ಗ: ಉದ್ರಿಕ್ತ ಸ್ಥಳೀಯರು ಕರೊನಾ ವೈರಸ್ ಕ್ವಾರಂಟೈನ್ ಕೇಂದ್ರವನ್ನು ಧ್ವಂಸ ಮಾಡಿರುವ ಘಟನೆ ಶಿವಮೊಗ್ಗದಿಂದ ಗುರುವಾರ ವರದಿಯಾಗಿದೆ.
ಬಾಪೂಜಿ ನಗರದಲ್ಲಿರುವ ಕ್ವಾರಂಟೇನ್ ಕೇಂದ್ರವನ್ನು ಅಲ್ಲಿನ ಸ್ಥಳೀಯರು ಧ್ವಂಸ ಮಾಡಿದ್ದಾರೆ. ಈ ವೇಳೆ ಸ್ಥಳೀಯರನ್ನು ಚದುರಿಸಿ, ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.
ಅಂದಹಾಗೆ ಕ್ವಾರಂಟೈನ್ ಕೇಂದ್ರವನ್ನು ಬಾಪೂಜಿ ನಗರದಲ್ಲಿರುವ ಬಿ.ಕೃಷ್ಣಪ್ಪ ಹಾಸ್ಟೆಲ್ನಲ್ಲಿ ಆರಂಭಿಸಲಾಗಿದೆ. ಕರೊನಾ ಭೀತಿಯಿಂದ ಕ್ವಾರಂಟೈನ್ ಕೇಂದ್ರವನ್ನು ಧ್ವಂಸ ಮಾಡಿದ್ದಾರೆ ಎನ್ನಲಾಗಿದೆ.
ಹಾಸ್ಟೆಲ್ ವಾರ್ಡನ್ ದೂರಿನ ಅನ್ವಯ ಸರ್ಕಾರಿ ಆಸ್ತಿ-ಪಾಸ್ತಿ ನಷ್ಟ ಹಾಗೂ ಸರ್ಕಾರಿ ಕೆಲಸಕ್ಕೆ ಅಡ್ಡಿ ಉಂಟುಮಾಡಿದ ಅಡಿಯಲ್ಲಿ ಗಲಾಟೆ ಮಾಡಿದವರ ವಿರುದ್ಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)