

ಬೆಂಗಳೂರು: ತಿರುಪತಿಯಲ್ಲಿ ವಿಶೇಷ ದರ್ಶನ ಮಾಡಿಸಿ, ಪ್ರಸಾದ ನೀಡುವ ನೆಪದಲ್ಲಿ ವೃದ್ಧರೊಬ್ಬರಿಗೆ 45 ಲಕ್ಷ ರೂ. ವಂಚಿಸಲಾಗಿದೆ. ಹನುಮಂತನಗರದ ಜಿ. ಮಾಧವ ರಾವ್(75) ವಂಚನೆಗೆ ಒಳಗಾದವರು. ಇವರು ನೀಡಿದ ದೂರಿನ ಮೇರೆಗೆ ಮೈಸೂರಿನ ಎಂ.ಜಿ. ರಘುನಾಥ್ ಮತ್ತು ಶೇಷಾದ್ರಿ ಎಂಬುವರ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
2018ರಲ್ಲಿ ಮಾಧವ ರಾವ್ ತಿರುಪತಿಗೆ ಹೋದಾಗ ರಘುನಾಥ್ ಪರಿಚಯವಾಗಿದ್ದು, ‘ದೇವಸ್ಥಾನದ ಕಚೇರಿಯಲ್ಲಿ ಕೆಲವರು ಸ್ನೇಹಿತರಿದ್ದಾರೆ. ಅವರ ಮೂಲಕ ನಿಮಗೆ ಜೀವನದಲ್ಲಿ ಒಮ್ಮೆಯೂ ಸಿಗದಂತಹ ವಿಶೇಷ ದರ್ಶನ ಮಾಡಿಸುತ್ತೇನೆ’ ಎಂದು ನಂಬಿಸಿದ್ದ. ಬಳಿಕ ಶೇಷಾದ್ರಿ ಮೊಬೈಲ್ ನಂಬರ್ ಕೊಟ್ಟು ಇವರ ಜತೆ ಮಾತನಾಡಿ, ಎಲ್ಲ ವ್ಯವಸ್ಥೆ ಮಾಡಿ ಕೊಡುತ್ತಾರೆ ಎಂದಿದ್ದ. ಮಾಧವರಾವ್, ಕೆಲ ದಿನಗಳ ಬಳಿಕ ಕುಟುಂಬಸಮೇತ ತಿರುಪತಿಗೆ ಹೋಗಿದ್ದು, ಶೇಷಾದ್ರಿ ಯಾವುದೇ ಟಿಕೆಟ್ ಇಲ್ಲದೆ ಕೇವಲ ಹಣ ಪಡೆದು ದೇವರ ದರ್ಶನ ಮತ್ತು ಪೂಜೆ ಮಾಡಿಸಿಕೊಟ್ಟಿದ್ದಾನೆ. ಇದಾದ ಬಳಿಕ, ‘ದೇವರ ರೇಷ್ಮೆ ಬಟ್ಟೆ ಮತ್ತು ಪ್ರಸಾದವನ್ನು ರಘುನಾಥ್ ಕೈಗೆ ಕೊಟ್ಟಿದ್ದೇನೆ. ಅವರನ್ನು ಸಂಪರ್ಕ ಮಾಡಿ ಪಡೆಯಿರಿ’ ಎಂದು ಕಳುಹಿಸಿದ್ದಾನೆ. ಮಾಧವ ರಾವ್, ರಘುನಾಥ್ನನ್ನು ಸಂಪರ್ಕ ಮಾಡಿದಾಗ ಕೃಷ್ಣಾಂಜನ (ಜಿಂಕೆ ಚರ್ಮದಿಂದ ಮಾಡಿದ ಬ್ಯಾಗ್) ಕೊಟ್ಟಂತೆ ಮಾಡಿದ್ದು, ಮತ್ತೆ ಹೆಚ್ಚಿನ ಪೂಜೆ ಮಾಡಿಸಿಕೊಡುತ್ತೇನೆ ಎಂದು ವಾಪಸ್ ಪಡೆದುಕೊಂಡು ಹೋಗಿದ್ದ.
ಕೆಲವೇ ನಿಮಿಷಗಳಲ್ಲಿ ಮತ್ತೆ ಕರೆ ಮಾಡಿ, ‘ಬೆಟ್ಟದಿಂದ ಬರುವಾಗ ಸಿವಿಲ್ ವಿಜಿಲೆನ್ಸ್ ಅಧಿಕಾರಿಗಳು ತಪಾಸಣೆ ನಡೆಸಿದರು. ಕೃಷ್ಣಾಂಜನ ಬ್ಯಾಗ್ ಜಪ್ತಿ ಮಾಡಿ ಪ್ರಶ್ನಿಸಿದಾಗ ನಿಮ್ಮ ಹೆಸರು, ವಿಳಾಸ ಹೇಳಿದ್ದೇನೆ. ಇಲ್ಲಿಂದ ಬೆಂಗಳೂರಿಗೆ ಹೋಗಿಬಿಡಿ. ತೊಂದರೆಗೆ ಸಿಲುಕಿಕೊಳ್ತೀರಿ. ಕೇಸಿನಿಂದ ತಪ್ಪಿಸಿಕೊಳ್ಳಲು ಅಧಿಕಾರಿಗಳಿಗೆ ಲಕ್ಷಾಂತರ ರೂ. ಲಂಚ ಕೊಡಬೇಕಾಗುತ್ತದೆ’ ಎಂದು ಹೆದರಿಸಿದ್ದಾನೆ. ಇದಾದ ಮೇಲೆ ಮಾಧವ ರಾವ್ಗೆ ಮತ್ತೆ ಕರೆ ಮಾಡಿದ ವಂಚಕರು ‘ವಿಜಿಲೆನ್ಸ್ ಅಧಿಕಾರಿಗಳು ಕೇಸು ದಾಖಲಿಸಿದ್ದಾರೆ. ಲಂಚ ಕೊಟ್ಟರೆ ಬಿಡುತ್ತಾರೆ. ಇಲ್ಲವಾದರೆ ಆರೆಸ್ಟ್ ಮಾಡುತ್ತಾರೆ ಎಂದು ಬೆದರಿಸಿ ಹಂತಹಂತವಾಗಿ 45 ಲಕ್ಷ ರೂ. ಪಡೆದಿದ್ದಾರೆ. ನೊಂದ ಮಾಧವ ರಾವ್, ಠಾಣೆಗೆ ಬಂದು ದೂರು ನೀಡಿದ್ದಾರೆ.
ಕಾಲ್ಪನಿಕ ಕಥೆ?
ಆರೋಪಿಗಳಾದ ಶೇಷಾದ್ರಿ ಮತ್ತು ರಘುನಾಥ್ ಸೇರಿಕೊಂಡು ಜಿಂಕೆ ಚರ್ಮದ ಬ್ಯಾಗ್ ಕೊಟ್ಟು ಮತ್ತೆ ವಾಪಸ್ ಪಡೆದು ಚೆಕ್ ಫೋಸ್ಟ್, ಪೊಲೀಸರು, ಬಂಧನ ಎಂಬ ಸುಳ್ಳು ಕಥೆ ಹೇಳಿ ಹೆದರಿಸಿ ಹಣ ಸುಲಿಗೆ ಮಾಡಿರುವ ಸಾಧ್ಯತೆಗಳು ಹೆಚ್ಚಾಗಿದೆ. ಆರೋಪಿಗಳ ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರಬರಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.