

ರಮೇಶ ಮೇಳಕುಂದಾ ಕಲಬುರಗಿ
ರಾಜ್ಯ ಪೊಲೀಸ್ ಇಲಾಖೆ 556 ಪಿಎಸ್ಐ (ಸಿವಿಲ್) ಹುದ್ದೆ ನೇಮಕಕ್ಕೆ ಅರ್ಜಿ ಆಹ್ವಾನಿಸಿದ್ದು, ಗರಿಷ್ಠ ವಯೋಮಿತಿಯನ್ನು ಎರಡು ವರ್ಷ ಹೆಚ್ಚಿಸದೇ ಅಧಿಸೂಚನೆ ಹೊರಡಿಸಿರುವುದು ಲಕ್ಷಾಂತರ ಆಕಾಂಕ್ಷಿಗಳ ಆಶಯಕ್ಕೆ ಕುತ್ತು ತಂದಿದೆ.
ಪ್ರಸ್ತುತ ಸಾಮಾನ್ಯವರ್ಗಕ್ಕೆ 28 ವರ್ಷ, ಹಿಂದುಳಿದ ಹಾಗೂ ಪರಿಶಿಷ್ಟ ವರ್ಗದವರಿಗೆ 30 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಆದರೆ, ಈ ಎರಡೂ ವರ್ಗಕ್ಕೂ ಇನ್ನೆರಡು ವರ್ಷ ವಯೋಮಿತಿ ಹೆಚ್ಚಿಸಬೇಕೆಂದು 2020ರ ಜನವರಿಯಲ್ಲಿ ಸರ್ಕಾರಕ್ಕೆ ಅಪರ ಮುಖ್ಯ ಕಾರ್ಯದರ್ಶಿ ಡಾ.ರಜನೀಶ ಗೋಯಲ್ ಅಧ್ಯಕ್ಷತೆಯ ವೃಂದ ಪರಿಶೀಲನಾ ಸಮಿತಿ ಸಲ್ಲಿಸಿರುವ ಶಿಫಾರಸು ಅಧಿಸೂಚನೆಗೊಂಡು ಅನುಷ್ಠಾನಕ್ಕೆ ಬರುವ ಮುನ್ನವೇ ಸರ್ಕಾರ ಹೊಸ ಅಧಿಸೂಚನೆ ಹೊರಡಿಸಿರುವುದು ಆಕಾಂಕ್ಷಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ. 2014ರಲ್ಲೂ ವಯೋಮಿತಿ ಹೆಚ್ಚಿಸದೆ ಅಧಿಸೂಚನೆ ಹೊರಡಿಸಿ 233 ಪಿಎಸ್ಐ ಹುದ್ದೆ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿತ್ತು. ಆಗ ಅಭ್ಯರ್ಥಿಗಳು ಹೋರಾಟ ಮಾಡಿದ್ದರಿಂದ ಸರ್ಕಾರ ವಯೋಮಿತಿಯನ್ನು ಎರಡು ವರ್ಷ ಹೆಚ್ಚಿಸಿತ್ತು. ಪ್ರಸ್ತುತ ಅರ್ಜಿ ಸಲ್ಲಿಕೆ ಆರಂಭಕ್ಕೆ 12 ದಿನ ಬಾಕಿ ಇದ್ದು, ಸರ್ಕಾರ ಎಚ್ಚೆತ್ತುಕೊಂಡು ಅಧಿಸೂಚನೆ ತಿದ್ದುಪಡಿ ಮಾಡಿ ವಯೋಮಿತಿ 2 ವರ್ಷ ಹೆಚ್ಚಿಸಬೇಕೆಂಬ ಬೇಡಿಕೆ ಆಕಾಂಕ್ಷಿಗಳದ್ದು.
ಇಲಾಖೆಯೊಳಗೂ ಹುದ್ದೆ ಕೈತಪ್ಪಿ ಹೋಗುವ ತಳಮಳ
ಮೃತ್ಯುಂಜಯ ಕಪಗಲ್ ಬೆಂಗಳೂರು
ಸಬ್ಇನ್ಸ್ಪೆಕ್ಟರ್ (ಸಿವಿಲ್) ಹುದ್ದೆಗಳ ನೇರ ನೇಮಕಕ್ಕೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕ ಇಲಾಖೆಯಲ್ಲಿನ ಹುದ್ದೆ ಆಕಾಂಕ್ಷಿತ ಸಿಬ್ಬಂದಿಗೆ ಗರಬಡಿಸಿದೆ. ಕೇವಲ 1 ದಿನದ ಅಂತರದಲ್ಲಿ ಅವಕಾಶ ತಪ್ಪಿಸಿ ಕೊಳ್ಳುತ್ತಿದ್ದೇವಲ್ಲ ಎಂದು ಸಾಕಷ್ಟು ಅರ್ಹ ಹಾಗೂ ಆಸಕ್ತರು ಕೈ ಕೈ ಹಿಚುಕಿಕೊಳ್ಳುತ್ತಿದ್ದಾರೆ.
ಜೂನ್ 1ರಿರಂದು ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗುತ್ತಿದ್ದು, ಅರ್ಜಿ ಸಲ್ಲಿಸುವ ಇಲಾಖಾ ಸಿಬ್ಬಂದಿಗೆ ಗರಿಷ್ಠ 40 ವರ್ಷ ವಯೋಮಿತಿ ನಿಗದಿಗೊಳಿಸಲಾಗಿದೆ. ಆದರೆ ಕೆಲವು ಆಕಾಂಕ್ಷಿತರ ವಯಸ್ಸು ಮೇ 31ಕ್ಕೆ 40 ಮೀರುವುದರಿಂದ ಅವಕಾಶ ವಂಚಿತರು ಸರ್ಕಾರದ ಕೃಪಾದೃಷ್ಟಿ ಯಾಚಿಸುತ್ತಿದ್ದಾರೆ.
ಪದವೀಧರ ಹಾಗೂ 8 ವರ್ಷಗಳ ಕರ್ತವ್ಯಾನುಭವ ಉಳ್ಳವರು ಹುದ್ದೆಗೆ ಅರ್ಹರಾಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಪೊಲೀಸ್ ಪೇದೆಗಳಾಗಿ ನೇಮಕಗೊಂಡವರಲ್ಲಿ ಪದವಿ, ಸ್ನಾತಕೋತ್ತರ, ಇಂಜಿನಿಯರಿಂಗ್ ಸೇರಿ ಉನ್ನತ ವ್ಯಾಸಂಗ ಪೂರೈಸಿದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕರೊನಾ ಪಿಡುಗು, ಲಾಕ್ಡೌನ್ ಇಲ್ಲದಿದ್ದರೆ ಸಕಾಲಕ್ಕೆ ಈ ಪ್ರಕ್ರಿಯೆ ಚಾಲನೆ ಪಡೆದು ಅರ್ಜಿ ಹಾಕಲು ಅವಕಾಶವಿರುತ್ತಿತ್ತು. ಕಳೆದ 1 ದಶಕದಿಂದ ಒಂದಲ್ಲ ಒಂದು ಕಾರಣಗಳಿಗಾಗಿ ಕೈಬಿಟ್ಟು ಹೋಗಿದೆ. ಇದೀಗ ವಯೋಮಿತಿ ಅಡ್ಡಗಾಲು ಹಾಕಿದ್ದು, ಗರಿಷ್ಠ ವಯೋಮಿತಿ 42ಕ್ಕೆ ಏರಿಸಬೇಕೆಂದು ಮುಖ್ಯಮಂತ್ರಿ, ಗೃಹ ಸಚಿವ ಹಾಗೂ ಡಿಜಿ-ಐಜಿಪಿಗೆ ಅನಾಮಧೇಯ ಲಿಖಿತ ಮನವಿ ಸಲ್ಲಿಕೆಯಾಗಿದೆ. ಜೂ.30ಕ್ಕೆ ಅರ್ಜಿ ಹಾಕಲು ಕೊನೇ ದಿನವಾಗಿದೆ. ಅದಕ್ಕೂ ಮುನ್ನವೇ ನಿರ್ಧಾರ ಕೈಗೊಳ್ಳಬೇಕೆಂದೂ ಹುದ್ದೆ ಆಕಾಂಕ್ಷಿಗಳು ಮೊರೆಯಿಟ್ಟಿದ್ದು, ಪೊಲೀಸ್ ಇಲಾಖೆಗೆ ಬೇಕಾದ ಪ್ರತಿಭೆ, ಕುಶಲಮತಿ ಮತ್ತು ಅನುಭವಕ್ಕೆ ಸೂಕ್ತ ಆದ್ಯತೆ ದೊರೆಯಲಿದೆ ಎಂದು ಕೋರಿಕೆಯನ್ನು ಪತ್ರದಲ್ಲಿ ಸಮರ್ಥಿಸಿಕೊಂಡಿದ್ದಾರೆ.
ಸೇವಾ ನಿರತರಿಗೆ ಪ್ರತ್ಯೇಕ ಭರ್ತಿ
ಎಸ್.ಎಂ.ಕೃಷ್ಣ ಆಡಳಿತಾವಧಿಯಲ್ಲಿ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರ ವಿಶೇಷ ಮುತುವರ್ಜಿ ಫಲವಾಗಿ 2003 ಮತ್ತು 2004ರಲ್ಲಿ ತಲಾ 200 ಸಿವಿಲ್ ಪಿಎಸ್ಐ ಹುದ್ದೆಗಳನ್ನು ಸೇವಾ ನಿರತರಿಗೆ ಮೀಸಲಿಟ್ಟು ಸ್ಪರ್ಧಾತ್ಮಕ ಭರ್ತಿ ಮಾಡಿಕೊಳ್ಳಲಾಗಿತ್ತು. ಆದರೆ, ಪ್ರತಿಭಾವಂತರು ಹಾಗೂ ಸಮರ್ಥರ ಕೊರತೆ ಇನ್ನಿತರ ಕಾರಣಗಳಿಗೆ ಈ ಪದ್ಧತಿ ಮೊಟಕುಗೊಂಡಿತು. ನಂತರದ ವರ್ಷಗಳಲ್ಲಿ ಒಟ್ಟು ನೇರ ನೇಮಕ ಹುದ್ದೆಗಳಲ್ಲಿ ಶೇ.10 ಸೇವಾ ನಿರತರಿಗೆ ಮೀಸಲಿಡುವ ವ್ಯವಸ್ಥೆ ಜಾರಿಗೆ ಬಂತು.