ಜಿಲ್ಲೆ

ಪಾಲಕರ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾಗಿದ್ದ ನವ ವಿವಾಹಿತೆ ಆತ್ಮಹತ್ಯೆ

ಶಿವಮೊಗ್ಗ: ಮೂರು ತಿಂಗಳ ಹಿಂದಷ್ಟೇ ಪ್ರೀತಿಸಿ ಮದುವೆಯಾಗಿದ್ದ ನವವಿವಾಹಿತೆಯೊಬ್ಬಳು ವರದಕ್ಷಿಣೆ ಕಿರುಕುಳದಿಂದ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂಸಿ ಠಾಣೆ ಪೊಲೀಸರು ಆಕೆಯ ಪತಿ ಮತ್ತು ಮಾವನನ್ನು ಬಂಧಿಸಿದ್ದಾರೆ.

ತಾಲೂಕಿನ ಕುಂಸಿಯ ಕನಕನಗರ ಕವನ (19) ಆತ್ಮಹತ್ಯೆ ಮಾಡಿಕೊಂಡವಳು. ಆಕೆಯ ಪತಿ ಭರತ್ ಮತ್ತು ಮಾವ ಚಂದ್ರಪ್ಪ ಎಂಬುವರನ್ನು ಬಂಧಿಸಲಾಗಿದೆ.

ಘಟನೆ ವಿವರ:

ಅಶೋಕನಗರದ ಕವನ ಮತ್ತು ಕುಂಸಿ ಕನಕನಗರದ ಭರತ್ ಪರಸ್ಪರ ಪ್ರೀತಿಸಿದ್ದರು. ಭರತ್ ಶಿವಮೊಗ್ಗದಲ್ಲಿ ಫವರ್ ಡೆಕೋರೇಟರ್ ಆಗಿದ್ದರೆ, ಕವನ ದ್ವೀತಿಯ ಪಿಯುಸಿ ಪೂರೈಸಿದ್ದಳು. ಪ್ರೀತಿ ವಿಚಾರವನ್ನು ಕವನ ತನ್ನ ತಾಯಿಗೆ ತಿಳಿಸಿದ್ದಳು. ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಕುಂಸಿಯಲ್ಲಿದ್ದ ಭರತ್ ಮನೆಗೆ ತೆರಳಿದ್ದ ಕವನ, ಆ ಬಳಿಕ ಗುಡ್ಡೇಕಲ್‌ನಲ್ಲಿ ವಿವಾಹವಾಗಿ ಗಂಡನ ಮನೆ ಸೇರಿದ್ದಳು.

ಈ ನಡುವೆ ತಾಯಿ ಬಳಿಯಲ್ಲಿದ್ದ ಹಣ ಹಾಗೂ ಒಡವೆ ತರುವಂತೆ ಒತ್ತಾಯಿಸಿ ಆಕೆಗೆ ಗಂಡನ ಮನೆಯವರು ದೈಹಿಕ ಮತ್ತು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು. ಇದರಿಂದ ಮನನೊಂದ ಕವನ ಫೆ.23ರಂದು ಸಂಜೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆಯ ಪತಿ ಭರತ್, ಅತ್ತೆ ನಾಗಮ್ಮ ಮತ್ತು ಮಾವ ಚಂದ್ರಪ್ಪ ಕಿರುಕುಳ ಕಾರಣವೆಂದು ಕವನ ತಾಯಿ ಭಾಗ್ಯಲಕ್ಷ್ಮಿ ದೂರಿನಲ್ಲಿ ಆರೋಪಿಸಿದ್ದಾರೆ.

ಕವನ ಟಿಕ್‌ಟಾಕ್ ಖ್ಯಾತಿ ಪಡೆದಿದ್ದಳು ಪಿಯುಸಿ ಮುಗಿಸಿ ಇತ್ತೀಚೆಗಷ್ಟೇ ಪ್ಯಾರಮೆಡಿಕಲ್‌ಗೆ ಪ್ರವೇಶ ಪಡೆದಿದ್ದಳು ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಕುಂಸಿ ಪೊಲೀಸರು ತಿಳಿಸಿದ್ದಾರೆ.

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ