ಜಿಲ್ಲೆ

ಮತ್ತದೇ ಮಂಗ ಲಾರಿಯಲ್ಲಿ ಬಂದಿಳಿಯಿತು, ಕೊಟ್ಟಿಗೆಹಾರದಲ್ಲಿ ಆತಂಕ!; ನರನ ವಿರುದ್ಧ ವಾನರನ ಸೇಡು?

Webdesk - Ravikanth

ಚಿಕ್ಕಮಗಳೂರು: ಮತ್ತದೇ ಮಂಗ ಲಾರಿಯಲ್ಲಿ ಬಂದಿಳಿದಿದ್ದರಿಂದ ಕೊಟ್ಟಿಗೆಹಾರ ಪ್ರದೇಶದಲ್ಲಿ ಪುನಃ ಅದೇ ಆತಂಕ ಮರುಕಳಿಸಿದೆ. ನರನ ವಿರುದ್ಧ ಸೇಡಿಗಾಗಿ ಈ ವಾನರ ಮತ್ತೆ ಬಂದಿರಬೇಕು ಎಂಬ ಭಯ ಇದೀಗ ಸ್ಥಳೀಯರನ್ನು ಕಾಡಲಾರಂಭಿಸಿದೆ.

ಲಾರಿಯೊಂದರಲ್ಲಿ 22 ಕಿ.ಮೀ. ದೂರದಿಂದ ಮರಳಿರುವ ಈ ಮಂಗ, ಇಂದು ರಾತ್ರಿ ಕೊಟ್ಟಿಗೆ ಹಾರ ಪ್ರದೇಶದಲ್ಲಿ ಮತ್ತೆ ಕಾಣಿಸಿಕೊಂಡಿದೆ. ಸೆ.16ರಂದು ಇಲ್ಲಿನ ಮುರಾರ್ಜಿ ಶಾಲೆಯಲ್ಲಿ ಮಂಗನೊಂದಿಗೆ ಆಟೋ ಚಾಲಕನೊಬ್ಬ ಕಿರಿಕ್ ಮಾಡಿಕೊಂಡಿದ್ದು, ಅದು ರೊಚ್ಚಿಗೆದ್ದಿತ್ತು.

ಆದರೆ ಅಂದು ಸುಮಾರು 50 ಜನರು ಸತತ 20 ಗಂಟೆಗಳ ಕಾರ್ಯಾಚರಣೆ ನಡೆಸಿದ್ದಲ್ಲದೆ, ಕೊನೆಗೆ ಅರಿವಳಿಕೆ ಚುಚ್ಚುಮದ್ದು ನೀಡಿ ಮಂಗನನ್ನು ಸೆರೆ ಹಿಡಿದಿದ್ದರು. ಬಳಿಕ ಅದನ್ನು 22 ಕಿ.ಮೀ. ದೂರ ತೆರಳಿ ಚಾರ್ಮಾಡಿ ಘಾಟ್​ನಲ್ಲಿ ಬಿಟ್ಟು ಬಂದಿದ್ದರು. ಆದರೆ ಅದೇ ಮಂಗ ಇಂದು ಲಾರಿಯೊಂದನ್ನು ಏರಿ ಮತ್ತದೇ ಪ್ರದೇಶಕ್ಕೆ ಬಂದಿಳಿದಿದೆ. ಇನ್ನು ಆ ಆಟೋಚಾಲಕನಿಗೇನು ಗ್ರಹಚಾರ ಕಾದಿದೆಯೋ ಎಂಬ ಮಾತುಗಳು ಕೇಳಿಬರಲಾರಂಭಿಸಿವೆ.