ಧಾರವಾಡ: ನಗರದ ಸಪ್ತಾಪುರದಲ್ಲಿ ನಡೆದಿದ್ದ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರ ತನಿಖಾ ದಳ (ಸಿಬಿಐ) ಕೆಎಎಸ್ ಅಧಿಕಾರಿ ಸೋಮು ನ್ಯಾಮಗೌಡ ಅವರನ್ನು ವಶಕ್ಕೆ ಪಡೆದಿದೆ.
2016ರ ಜೂನ್ 15 ರಂದು ಈ ಕೊಲೆ ನಡೆದಿತ್ತು. ಅವರ ಜಿಮ್ನ ಹೊರಗೆ ಸುಪಾರಿ ಹಂತಕರು ಮೊದಲಿಗೆ ಕಣ್ಣಿಗೆ ಖಾರದ ಪುಡಿ ಎರಚಿದ್ದರು. ಬಳಿಕ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಬೈಕ್ನಲ್ಲಿ ಪರಾರಿಯಾಗಿದ್ದರು. 2019ರ ಸೆಪ್ಟೆಂಬರ್ನಿಂದ ತನಿಖೆ ನಡೆಸುತ್ತಿರುವ ಸಿಬಿಐ ಕಳೆದ ನವೆಂಬರ್ ತಿಂಗಳಿನಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ. ಕಾಂಗ್ರೆಸ್ ಮುಖಂಡ ವಿನಯ್ ಕುಲಕರ್ಣಿ ಅವರನ್ನು ಬಂಧಿಸಿತ್ತು. ಇವರೀಗ ಸಿಬಿಐ ವಶದಲ್ಲಿದ್ದು, ಇದೀಗ ಸೋಮು ನ್ಯಾಮಗೌಡ ಅವರನ್ನು ವಶಕ್ಕೆ ಪಡೆಯಲಾಗಿದೆ.
ಈ ಪ್ರಕರಣ ಇದೀಗ ಕುತೂಹಲದ ತಿರುವು ಪಡೆಯುತ್ತಿದೆ. ಇಂದೇ ನ್ಯಾಮೇಗೌಡ ಅವರನ್ನು ಬಂಧಿಸಿರುವುದು ಕೂಡ ಸಿಬಿಐನ ಹೊಸ ತಂತ್ರವೆಂದೇ ಹೇಳಲಾಗುತ್ತಿದೆ. ಏಕೆಂದರೆ ತಮ್ಮನ್ನು ಬಂಧಿಸಿರುವುದನ್ನು ಪ್ರಶ್ನಿಸಿ ವಿನಯ್ ಕುಲಕರ್ಣಿ ಅವರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಅದು ಇಂದು ವಿಚಾರಣೆಗೆ ಬರುವ ಸಾಧ್ಯತೆ ಇದೆ. ಇದರ ಬೆನ್ನಲ್ಲೇ ಇದೇ ಕೆಎಎಸ್ ಅಧಿಕಾರಿಯನ್ನು ಬಂಧಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಪ್ರಕರಣ ತೀವ್ರತೆಯನ್ನು ಕೋರ್ಟ್ ಗಮನಕ್ಕೆ ತರಲು ಸಿಬಿಐ ಈ ತಂತ್ರ ಹೂಡಿದೆ ಎನ್ನಲಾಗುತ್ತಿದೆ. ಈ ಮೂಲಕ ಪ್ರಕರಣವನ್ನು ಮತ್ತಷ್ಟು ಗಟ್ಟಿಸಿಗೊಳಿಸಲು ಸಿಬಿಐ ಯತ್ನಿಸುತ್ತಿರುವ ಸಾಧ್ಯತೆ ಇದೆ.
ಸೋಮು ನ್ಯಾಮಗೌಡ ಅವರು ಸಚಿವ ವಿನಯ್ ಕುಲಕರ್ಣಿಯವರ ಮಾಜಿ ಆಪ್ತ ಸಹಾಯಕರು. ವಿನಯ್ ಕುಲಕರ್ಣಿ ಸಚಿವರಾಗಿದ್ದಾಗ ಸೋಮು ಅವರನ್ನು ಸರ್ಕಾರದಿಂದ ಆಪ್ತ ಸಹಾಯಕರಾಗಿ ನೇಮಕ ಮಾಡಲಾಗಿತ್ತು. ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೋಮು ನ್ಯಾಮಗೌಡ ಅವರು ಈಗಾಗಲೇ 10ಕ್ಕೂ ಹೆಚ್ಚು ಬಾರಿ ಸಿಬಿಐ ವಿಚಾರಣೆ ಎದುರಿಸಿದ್ದಾರೆ.